ಅಹಮದಾಬಾದ್: ದೇಶವನ್ನೇ ಬೆಚ್ಚಿಬೀಳಿಸಿದ್ದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಇಂದು ಒಂದು ವರ್ಷ ತುಂಬಿದೆ. 2025ರ ಜೂನ್ 12ರಂದು ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಏರ್ ಇಂಡಿಯಾ AI171 ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು 260 ಮಂದಿಯ ಸಾವಿಗೆ ಕಾರಣವಾಗಿತ್ತು.
ಮಧ್ಯಾಹ್ನ 1.38ಕ್ಕೆ ಹಾರಾಟ ಆರಂಭಿಸಿದ್ದ 12 ವರ್ಷ ಹಳೆಯ ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನದಲ್ಲಿ 230 ಪ್ರಯಾಣಿಕರು ಹಾಗೂ 12 ಸಿಬ್ಬಂದಿ ಸೇರಿ ಒಟ್ಟು 242 ಮಂದಿ ಪ್ರಯಾಣಿಸುತ್ತಿದ್ದರು. ಆದರೆ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನ ನಿಯಂತ್ರಣ ಕಳೆದುಕೊಂಡು ಅಹಮದಾಬಾದ್ನ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿತ್ತು.
ಈ ಭೀಕರ ದುರಂತದಲ್ಲಿ ವಿಮಾನದ ಪೈಲಟ್ ಸೇರಿದಂತೆ 241 ಮಂದಿ ಮೃತಪಟ್ಟಿದ್ದರು. ನೆಲದಲ್ಲಿದ್ದ 19 ಮಂದಿ ಸಹ ಪ್ರಾಣ ಕಳೆದುಕೊಂಡ ಪರಿಣಾಮ ಒಟ್ಟು ಮೃತರ ಸಂಖ್ಯೆ 260ಕ್ಕೆ ಏರಿತ್ತು. ದುರಂತದ ಒಂದು ವರ್ಷ ಪೂರ್ಣಗೊಂಡಿದ್ದರೂ ಅಪಘಾತಕ್ಕೆ ಕಾರಣವಾದ ನಿಖರ ಅಂಶಗಳ ಕುರಿತ ಅಂತಿಮ ತನಿಖಾ ವರದಿ ಇನ್ನೂ ಪ್ರಕಟವಾಗಿಲ್ಲ.
ಇದೀಗ ಮೃತಪಟ್ಟವರ ಕುಟುಂಬಗಳ ಪೈಕಿ ಶೇ.96ರಷ್ಟು ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಮಧ್ಯಂತರ ಪರಿಹಾರ ವಿತರಿಸಲಾಗಿದ್ದು, ಅಂತಿಮ ಪರಿಹಾರ ಮತ್ತು ತನಿಖಾ ವರದಿಗಾಗಿ ಕುಟುಂಬಸ್ಥರು ಇನ್ನೂ ಕಾಯುತ್ತಿದ್ದಾರೆ.



