ಕಾನ್ಪುರ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆದ ಪ್ರಕರಣವನ್ನು ಉತ್ತರ ಪ್ರದೇಶ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಘಟನೆಯ ಕೆಲವೇ ಗಂಟೆಗಳಲ್ಲಿ ಶಂಕಿತನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಕಾನ್ಪುರ-ದೆಹಲಿ ಮಾರ್ಗದ ರೈಲು ಫಿರೋಜಾಬಾದ್ ಜಿಲ್ಲೆಯ ಮಖನ್‌ಪುರ ನಿಲ್ದಾಣದ ಬಳಿ ಸಂಜೆ 7.15ರ ಸುಮಾರಿಗೆ ಸಂಚರಿಸುತ್ತಿದ್ದ ವೇಳೆ ಕಲ್ಲು ತೂರಾಟ ನಡೆದಿದೆ. ಕಲ್ಲು ಎಸಿ ಕೋಚ್‌ನ ಕಿಟಕಿಗೆ ಬಡಿದ ಪರಿಣಾಮ ಗಾಜು ಹಾನಿಗೊಳಗಾಗಿದ್ದು, ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಅದೇ ಕೋಚ್‌ನಲ್ಲಿ ಇದ್ದ ಮೋಹನ್ ಭಾಗವತ್ ಅವರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.
ಘಟನೆ ಬೆನ್ನಲ್ಲೇ ಆಗ್ರಾ ವಲಯದ ಎಡಿಜಿ ಎಸ್.ಕೆ. ಭಗತ್, ಡಿಐಜಿ ಶೈಲೇಶ್ ಪಾಂಡೆ ಹಾಗೂ ಫಿರೋಜಾಬಾದ್ ಎಸ್‌ಎಸ್‌ಪಿ ಆದಿತ್ಯ ಲಾಂಘೆ ನೇತೃತ್ವದಲ್ಲಿ ತನಿಖೆ ಆರಂಭಿಸಲಾಯಿತು. ಸಿಸಿಟಿವಿ ದೃಶ್ಯಾವಳಿ ಹಾಗೂ ಸ್ಥಳೀಯ ಮಾಹಿತಿಗಳ ಆಧಾರದ ಮೇಲೆ ಒಬ್ಬ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ.
ಸುರಕ್ಷತಾ ಪರಿಶೀಲನೆಗಾಗಿ ರೈಲನ್ನು ತುಂಡ್ಲಾ ಜಂಕ್ಷನ್ ಹೊರಭಾಗದಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಪರಿಶೀಲನೆ ಪೂರ್ಣಗೊಂಡ ಬಳಿಕ ಸಂಜೆ 7.41ಕ್ಕೆ ರೈಲು ದೆಹಲಿಯತ್ತ ತನ್ನ ಪ್ರಯಾಣವನ್ನು ಮುಂದುವರಿಸಿತು. ಪ್ರಕರಣದ ಕುರಿತು ರೈಲ್ವೆ ಮತ್ತು ಸ್ಥಳೀಯ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.



