ಬೀದರ್: ಔರಾದ್ ತಾಲೂಕಿನ ಶೆಂಬೆಳ್ಳಿ ಗ್ರಾಮದಲ್ಲಿ ಮಾವಿನ ಹಣ್ಣು ಸೇವಿಸಿದ ಬಳಿಕ ಸಂಭವಿಸಿದ ಆಹಾರ ವಿಷಬಾಧೆಯಿಂದ ಇಬ್ಬರು ಸಹೋದರಿಯರು ಮೃತಪಟ್ಟಿರುವ ಘಟನೆ ನಡೆದಿದೆ.
ಭವಾನಿ ವೈಜಿನಾಥ ಮೇತ್ರೆ (17) ಹಾಗೂ ಸಂಧ್ಯಾರಾಣಿ ಮೇತ್ರೆ (14) ಮೃತಪಟ್ಟವರು. ಮನೆಯಲ್ಲಿ ಊಟದ ನಂತರ ಕುಟುಂಬದವರು ಸೇರಿ ಮಾವಿನ ಹಣ್ಣು ಸೇವಿಸಿದ ಬಳಿಕ ಕೆಲವೇ ಸಮಯದಲ್ಲಿ ಎಲ್ಲರಿಗೂ ತೀವ್ರ ಅಸ್ವಸ್ಥತೆ ಉಂಟಾಗಿದೆ.
ಅಸ್ವಸ್ಥರಾದ ಎಲ್ಲರನ್ನು ತಕ್ಷಣ ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಇಬ್ಬರು ಸಹೋದರಿಯರ ಜೀವ ಉಳಿಸಲಾಗಲಿಲ್ಲ. ಮತ್ತೊಬ್ಬ ಸಹೋದರಿ ವಿಜಯಶ್ರೀ (19) ಚಿಕಿತ್ಸೆ ಪಡೆಯುತ್ತಿದ್ದು, ತಾಯಿ ಮತ್ತು ಇನ್ನೊಬ್ಬ ಸಹೋದರಿ ಚೇತರಿಸಿಕೊಳ್ಳುತ್ತಿದ್ದಾರೆ.
ಘಟನೆ ಸಂಬಂಧ ನಾರಾಯಣಗುಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯಲಾಗುತ್ತಿದೆ. ತನಿಖೆಯ ಬಳಿಕ ನಿಖರ ಕಾರಣ ತಿಳಿದುಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



