ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿರುವ ವಿಕ್ರಾಂತ್ ಆನೆಯ ಕಾಲಿಗೆ ಮತ್ತೆ ಗಾಯವಾಗಿರುವುದು ವನ್ಯಜೀವಿ ಸಂರಕ್ಷಣೆ ಕುರಿತ ಚರ್ಚೆಗೆ ಕಾರಣವಾಗಿದೆ.
ಮುಂಭಾಗದ ಎಡಗಾಲಿಗೆ ಉಂಟಾಗಿರುವ ಗಾಯ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ ಎಂದು ತಿಳಿದುಬಂದಿದೆ. ತರಬೇತಿ ವೇಳೆ ಉಂಟಾದ ಗಾಯವೇ ಇದಕ್ಕೆ ಕಾರಣ ಎನ್ನಲಾಗುತ್ತಿದ್ದು, ಈಗಾಗಲೇ ಗಂಭೀರ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಆನೆ ಮತ್ತೆ ನೋವಿನಿಂದ ನರಳುತ್ತಿದೆ.
2025ರ ಮಾರ್ಚ್‌ನಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ಭಾಗದಲ್ಲಿ ಸೆರೆ ಹಿಡಿಯಲಾದ ವಿಕ್ರಾಂತ್ ಅನ್ನು ಸಕ್ರೆಬೈಲು ಆನೆ ಬಿಡಾರಕ್ಕೆ ತರಲಾಗಿತ್ತು. ಅಲ್ಲಿಗೆ ಬಂದ ಕೆಲವೇ ದಿನಗಳಲ್ಲಿ ಕಾಲಿಗೆ ಗಾಯವಾಗಿದ್ದ ಪ್ರಕರಣ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
ಆನೆಗಳ ಚಿಕಿತ್ಸೆಗೆ ಅಗತ್ಯ ತಜ್ಞ ವೈದ್ಯರ ಕೊರತೆ ಇದೆ ಎಂದು ಪರಿಸರವಾದಿಗಳು ಆರೋಪಿಸಿದ್ದು, ಪ್ರಾಣಿಗಳ ಕಲ್ಯಾಣದ ಬಗ್ಗೆ ಅರಣ್ಯ ಇಲಾಖೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಪರಿಸರವಾದಿ ಜೋಸೆಫ್ ಹೂವರ್ ಸೇರಿದಂತೆ ಹಲವು ವನ್ಯಜೀವಿ ಹೋರಾಟಗಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.



