ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದರು. ಮುಖ್ಯಮಂತ್ರಿಯಾದ ಬಳಿಕ ಕರ್ನಾಟಕಕ್ಕೆ ನೀಡಿದ ಮೊದಲ ಭೇಟಿಯಲ್ಲಿ ಅವರು ಕ್ಷೇತ್ರದ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಗಮನ ಸೆಳೆದರು.
ದೇವಸ್ಥಾನಕ್ಕೆ ಆಗಮಿಸಿದ ಸಿಎಂ ವಿಜಯ್ ಅವರನ್ನು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅರ್ಚಕ ವೃಂದ ಸಾಂಪ್ರದಾಯಿಕವಾಗಿ ಸ್ವಾಗತಿಸಿತು. ಶಲ್ಯ ಧರಿಸಿ ದೇವಸ್ಥಾನ ಪ್ರವೇಶಿಸಿದ ಅವರು ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ನಡೆದ ಸಂಕಲ್ಪ ಪೂಜೆಯಲ್ಲಿ ಭಾಗವಹಿಸಿದರು.
ದೇವಿಗೆ ರೇಷ್ಮೆ ಸೀರೆ, ಫಲ-ತಾಂಬೂಲ ಸಮರ್ಪಿಸಿದ ವಿಜಯ್ ಸುಮಾರು 30 ನಿಮಿಷಗಳ ಕಾಲ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗವನ್ನು ಕಾಣಿಕೆಯಾಗಿ ಅರ್ಪಿಸಿದರು. ದೇವಸ್ಥಾನದ ನಿತ್ಯ ಪೂಜಾ ವಿಧಿವಿಧಾನಗಳಂತೆ ದೀಪಾರಾಧನೆ ನೆರವೇರಿಸಲಾಯಿತೇ ಹೊರತು ಯಾವುದೇ ವಿಶೇಷ ಪೂಜೆ ಆಯೋಜಿಸಲಾಗಿಲ್ಲ ಎಂದು ದೇವಸ್ಥಾನ ಮೂಲಗಳು ತಿಳಿಸಿವೆ.
ಪೂಜೆ ಬಳಿಕ ಅರ್ಚಕರು ರಕ್ಷಾದಾರ ಕಟ್ಟಿದ ನಂತರ ಸಿಎಂ ವಿಜಯ್ ದೇವಸ್ಥಾನದಿಂದ ನಿರ್ಗಮಿಸಿದರು. ಅವರ ಭೇಟಿ ಹಿನ್ನೆಲೆಯಲ್ಲಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.



