ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಭೇಟಿ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಅಥವಾ ವಿಶೇಷ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂಬ ಸುದ್ದಿಗಳಿಗೆ ದೇವಸ್ಥಾನ ಆಡಳಿತ ಸ್ಪಷ್ಟನೆ ನೀಡಿದೆ.
ದೇವಸ್ಥಾನದ ಅರ್ಚಕ ನಿತ್ಯಾನಂದ ಅಡಿಗ ಮಾತನಾಡಿ, ಕೊಲ್ಲೂರು ಕ್ಷೇತ್ರದ ಸಂಪ್ರದಾಯದ ಪ್ರಕಾರ ಯಾವುದೇ ವಿವಿಐಪಿ ಅಥವಾ ಗಣ್ಯ ವ್ಯಕ್ತಿಗಳಿಗೆ ಪ್ರತ್ಯೇಕ ಪೂಜೆ ನಡೆಸುವ ಪದ್ಧತಿ ಇಲ್ಲ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ವಿಜಯ್ ಅವರಿಗೂ ಸಾಮಾನ್ಯ ಭಕ್ತರಿಗೆ ಇರುವ ರೀತಿಯಲ್ಲಿಯೇ ದೇವಿಯ ದರ್ಶನ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಹೇಳಿದ್ದಾರೆ.
ಸರ್ಕಾರಿ ಪ್ರೋಟೋಕಾಲ್ ಪ್ರಕಾರ ಪೂರ್ಣಕುಂಭ ಸ್ವಾಗತ ನೀಡಿ ಗೌರವ ಸಲ್ಲಿಸಲಾಗುತ್ತದೆ. ಆದರೆ ವಿಶೇಷ ಪೂಜೆ, ವಿಶೇಷ ಮಂಗಳಾರತಿ ಅಥವಾ ಹೆಚ್ಚುವರಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದಿಲ್ಲ. ಅವರು ದೇವಸ್ಥಾನಕ್ಕೆ ಆಗಮಿಸುವ ವೇಳೆಯಲ್ಲಿ ಮಹಾಮಂಗಳಾರತಿ ನಡೆಯುತ್ತಿದ್ದರೆ ಅದನ್ನು ವೀಕ್ಷಿಸುವ ಅವಕಾಶ ಮಾತ್ರ ದೊರೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇಂದು ಶುಕ್ರವಾರವಾಗಿರುವುದರಿಂದ ದೇವಸ್ಥಾನದಲ್ಲಿ ನಡೆಯಲಿರುವ ರಥೋತ್ಸವ ಹಾಗೂ ಇತರೆ ಧಾರ್ಮಿಕ ವಿಧಿವಿಧಾನಗಳು ಎಂದಿನ ನಿತ್ಯ ಕಾರ್ಯಕ್ರಮಗಳ ಭಾಗವಾಗಿದ್ದು, ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ವಿಶೇಷವಾಗಿ ಆಯೋಜಿಸಲಾಗಿಲ್ಲ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಭೇಟಿ ಹಿನ್ನೆಲೆಯಲ್ಲಿ ದೇವಸ್ಥಾನ ಪರಿಸರದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಅರ್ಚಕ ವೃಂದ, ದೇವಸ್ಥಾನ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸಮನ್ವಯದಲ್ಲಿ ಎಲ್ಲ ವ್ಯವಸ್ಥೆಗಳು ಪೂರ್ಣಗೊಂಡಿವೆ.



