HomeGadag Newsಜಿ.ಎಸ್.ಪಿಗೆ ಸಚಿವ ಸ್ಥಾನಕ್ಕಾಗಿ ಮಠಾಧೀಶರ ಒತ್ತಡ

ಜಿ.ಎಸ್.ಪಿಗೆ ಸಚಿವ ಸ್ಥಾನಕ್ಕಾಗಿ ಮಠಾಧೀಶರ ಒತ್ತಡ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಕ್ಷೇತ್ರದ ಶಾಸಕ ಹಾಗೂ ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಪಾಟೀಲರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು. ಅವರಿಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಮತ್ತಷ್ಟು ವಿಳಂಬ ಮಾಡಿದರೆ ಸರ್ಕಾರವೇ ರಾಜಕೀಯ ಸಂಕಷ್ಟ ಎದುರಿಸಬೇಕಾಗಬಹುದು ಎಂದು ಕುದರಿಮೋತಿ ಶ್ರೀಮಠದ ವಿಜಯಮಹಾಂತ ಸ್ವಾಮೀಜಿ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

ಪಟ್ಟಣದ ಯಾತ್ರಾನಿವಾಸದಲ್ಲಿ ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಧರ್ಮಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಎಸ್. ಪಾಟೀಲರು ನಾಲ್ಕು ಬಾರಿ ಶಾಸಕರಾಗಿ ಕ್ಷೇತ್ರ ಮತ್ತು ಪಕ್ಷಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಇಂತಹ ಅನುಭವಿ ಹಾಗೂ ಜನಪರ ನಾಯಕರಿಗೆ ಸಚಿವ ಸ್ಥಾನ ನೀಡುವುದು ಕಾಂಗ್ರೆಸ್ ಹೈಕಮಾಂಡ್‌ನ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ರೋಣ ಮತಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆಯಬೇಕು ಎಂಬುದು ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದೆ. ಅಭಿವೃದ್ಧಿಯ ದೃಷ್ಟಿಯಿಂದಲೂ ಕ್ಷೇತ್ರಕ್ಕೆ ಸಚಿವ ಸ್ಥಾನ ಅಗತ್ಯವಾಗಿದೆ. ಈ ಭಾಗದ ಜನರ ಆಶಯವನ್ನು ಕಾಂಗ್ರೆಸ್ ವರಿಷ್ಠರು ಗಂಭೀರವಾಗಿ ಪರಿಗಣಿಸಬೇಕು ಎಂದು ಶ್ರೀಗಳು ಆಗ್ರಹಿಸಿದರು.

ಜಿ.ಎಸ್. ಪಾಟೀಲರು ಎಲ್ಲ ಜಾತಿ, ಧರ್ಮ ಮತ್ತು ಸಮುದಾಯಗಳನ್ನು ಸಮಾನವಾಗಿ ಕಾಣುವ ನಾಯಕರು. ಪಕ್ಷದ ಸಂಘಟನೆಗೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಅವರು ನೀಡಿರುವ ಕೊಡುಗೆ ಅಪಾರವಾಗಿದೆ. ಹೀಗಿರುವಾಗ ಸಚಿವ ಸ್ಥಾನ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಡಾ. ಹೆಚ್.ಕೆ. ಪಾಟೀಲರು ಹಲವು ಬಾರಿ ಸಚಿವರಾಗಿ ಹಾಗೂ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಈ ಬಾರಿ ರೋಣ ಕ್ಷೇತ್ರಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅವರು ದೊಡ್ಡಮನಸ್ಸು ತೋರಬೇಕು. ಇದರಿಂದ ಅವರ ಗೌರವ ಮತ್ತಷ್ಟು ಹೆಚ್ಚಾಗುತ್ತದೆ ಎಂದು ವಿಜಯಮಹಾಂತ ಶ್ರೀಗಳು ಹೇಳಿದರು.

ಮಠಾಧೀಶರ ಧ್ವನಿ ಒಂದೇ

ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಿ.ಎಸ್. ಪಾಟೀಲರು ಸರ್ವಧರ್ಮ ಸಮಭಾವದ ನಾಯಕರು. ಇಂತಹ ನಾಯಕತ್ವಕ್ಕೆ ಸಚಿವ ಸ್ಥಾನ ನೀಡಿದರೆ ಪಕ್ಷಕ್ಕೂ ಬಲ ಬರುತ್ತದೆ ಎಂದರು.

ಅಭಿನವ ಕೊಟ್ಟೂರೇಶ್ವರ ಸ್ವಾಮೀಜಿ ಮಾತನಾಡಿ, “ಜಿ.ಎಸ್. ಪಾಟೀಲರು ಕೇವಲ ವ್ಯಕ್ತಿಯಲ್ಲ, ಒಂದು ಶಕ್ತಿ. ಅವರ ಸಾಮರ್ಥ್ಯವನ್ನು ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಬಳಸಿಕೊಳ್ಳಬೇಕು” ಎಂದು ಹೇಳಿದರು.

ಕೊತಬಾಳ ಅಂಕಲಿ ಮಠದ ಗಂಗಾಧರ ಶ್ರೀಗಳು, ಜಿಗೇರಿ ಮಠದ ಗುರುಸಿದ್ದ ಶಿವಾಚಾರ್ಯರು ಹಾಗೂ ಇತರ ಮಠಾಧೀಶರು ಸಹ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವೇ.ಮೂ. ರೇವಣಸಿದ್ದೇಶ್ವರ ಶ್ರೀಗಳು, ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ.ಬಿ. ಸೋಮನಕಟ್ಟಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

“ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡುವುದು ರೋಣ ಕ್ಷೇತ್ರಕ್ಕೆ ಸಾಮಾಜಿಕ ನ್ಯಾಯ ಒದಗಿಸಿದಂತಾಗುತ್ತದೆ. ಈ ವಿಚಾರದಲ್ಲಿ ವಿಳಂಬವಾದರೆ ಸರ್ಕಾರ ರಾಜಕೀಯವಾಗಿ ಬೆಲೆ ತೆರಬೇಕಾಗಬಹುದು.”

ವಿಜಯಮಹಾಂತ ಸ್ವಾಮೀಜಿ, ಕುದರಿಮೋತಿ ಶ್ರೀಮಠ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!