ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ವಾರ್ಡ್ ನಂ. 3ರಲ್ಲಿ ಉಂಟಾಗಿರುವ ಕುಡಿಯುವ ನೀರಿನ ಕೊರತೆ, ಕಾಲುವೆ ಸ್ವಚ್ಛತೆ, ಬೀದಿದೀಪಗಳ ನಿರ್ವಹಣೆ, ಸಾರ್ವಜನಿಕ ಶೌಚಾಲಯ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಆಗ್ರಹಿಸಿ ಸಾರ್ವಜನಿಕರು ಹಾಗೂ ಸಮಗ್ರ ರೈತಪರ ಹೋರಾಟ ಸಮಿತಿ ಸದಸ್ಯರು ಬುಧವಾರ ಪುರಸಭೆ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಗೆ ಕುಂದಗೋಳ ಅಭಿನವ ಬಸವಣ್ಣ ಶ್ರೀಗಳು ಹಾಗೂ ದುಮ್ಮವಾಡ ಸರ್ಪಭೂಷಣ ಶ್ರೀಗಳು ಬೆಂಬಲ ಸೂಚಿಸಿದರು.
ಕೆಂಚಲಾಪುರ ಓಣಿಯಿಂದ ಎತ್ತು, ಆಕಳು, ಕೊಡಪಾನ, ಚರಗಿ ಹಾಗೂ ಪೊರಕೆಗಳೊಂದಿಗೆ ವಾದ್ಯಮೇಳದ ಮೂಲಕ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಮುಖ್ಯ ಬಜಾರ್ ರಸ್ತೆಯ ಮೂಲಕ ಪುರಸಭೆ ಕಚೇರಿಗೆ ಆಗಮಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಮಗ್ರ ರೈತಪರ ಹೋರಾಟ ವೇದಿಕೆಯ ತಾಲೂಕು ಅಧ್ಯಕ್ಷ ಮಂಜುನಾಥ ಮಾಗಡಿ, ಪಟ್ಟಣಕ್ಕೆ ತಿಂಗಳಿಗೊಮ್ಮೆ ಮಾತ್ರ ನೀರು ಸರಬರಾಜಾಗುತ್ತಿದೆ. ನದಿ ನೀರಿನ ಪೈಪ್‌ಲೈನ್ ದುರಸ್ತಿ ಹಾಗೂ ವಿದ್ಯುತ್ ವ್ಯತ್ಯಯದ ನೆಪ ಹೇಳಲಾಗುತ್ತಿದೆ. ನೂರಾರು ಕೊಳವೆಬಾವಿಗಳ ನಿರ್ವಹಣೆ ಹಾಗೂ ಪಂಪ್‌ಸೆಟ್‌ಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಳ್ಳದಕೇರಿ ಪ್ರದೇಶದಲ್ಲಿ ಬಹುತೇಕ ರೈತ ಕುಟುಂಬಗಳು ವಾಸವಾಗಿದ್ದು, ಕುಡಿಯುವ ನೀರು ಹಾಗೂ ಸ್ವಚ್ಛತೆಯ ಕೊರತೆಯಿಂದ ಸಂಕಷ್ಟ ಎದುರಿಸುತ್ತಿವೆ. ಅನೇಕ ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ಸಿಗದ ಕಾರಣ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಹೇಳಿದರು.
ಜೋನ್ ಹಳ್ಳದಿಂದ ಲಂಡಿ ಹಳ್ಳದವರೆಗೆ ಗಿಡಗಂಟಿಗಳು ಬೆಳೆದು ಕೆಸರು ತುಂಬಿಕೊಂಡಿದ್ದು, ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ತೊಂದರೆಯಾಗುತ್ತಿದೆ. ಬೀದಿದೀಪ, ಸಾರ್ವಜನಿಕ ನಳ, ಶೌಚಾಲಯ ಹಾಗೂ ಹಳ್ಳಕ್ಕೆ ಕಲ್ವರ್ಟ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ನಾಗರಾಜ ಚಿಂಚಲಿ ಮಾತನಾಡಿ, ಪಟ್ಟಣದಲ್ಲಿ ನೀರು, ರಸ್ತೆ, ಆಶ್ರಯ ನಿವೇಶನ ಹಾಗೂ ಸ್ವಚ್ಛತೆಯ ಸಮಸ್ಯೆಗಳು ವರ್ಷಗಳಿಂದ ಮುಂದುವರಿದಿವೆ. ಜನಪ್ರತಿನಿಧಿಗಳು ಸಾಮಾಜಿಕ ಜಾಲತಾಣಗಳ ಪ್ರಚಾರಕ್ಕಿಂತ ಜನರ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಹೇಳಿದರು.
ಸಂಜೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಯೋಜನಾ ನಿರ್ದೇಶಕ ಬಸನಗೌಡ ಕೊಟೂರ ಮನವಿ ಸ್ವೀಕರಿಸಿ ಮಾತನಾಡಿ, ನಾಲ್ಕೈದು ದಿನಗಳಲ್ಲಿ ಹೊಸ ಬೋರ್‌ವೆಲ್ ಕೊರೆಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ನಳ, ಶೌಚಾಲಯ ಹಾಗೂ ಇತರ ಮೂಲಭೂತ ಸೌಲಭ್ಯಗಳ ಕಲ್ಪನೆಗೂ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ನಿರ್ಲಕ್ಷ್ಯ ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಟಾಕಪ್ಪ ಸಾತಪುತೆ, ಮಲ್ಲಪ್ಪ ಅಂಕಲಿ, ದುಂಡಪ್ಪ ಕೋಟಗಿ, ಹೊನ್ನಪ್ಪ ವಡ್ಡರ, ಶಿವಣ್ಣ ಕಟಗಿ, ಪ್ರಕಾಶ ಗುತ್ತಲ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಸಿಪಿಐ ಬಿ.ವಿ. ನ್ಯಾಮಗೌಡ್ರ, ಪಿಎಸ್‌ಐ ನಾಗರಾಜ ಗಡಾದ ಹಾಗೂ ಟಿ.ಕೆ. ರಾಠೋಡ ಭದ್ರತಾ ವ್ಯವಸ್ಥೆ ನಿರ್ವಹಿಸಿದರು.
“ಹೋರಾಟ ಮಾಡುತ್ತೇವೆ ಎಂದು ತಿಳಿದ ಕೂಡಲೇ ಅಧಿಕಾರಿಗಳು ಸ್ವಚ್ಛತೆ, ನೀರು ಹಾಗೂ ಬೆಳಕಿನ ವ್ಯವಸ್ಥೆಗೆ ಮುಂದಾಗಿದ್ದಾರೆ. ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕು.”
ಮಂಜುನಾಥ ಮಾಗಡಿ, ತಾಲೂಕು ಅಧ್ಯಕ್ಷ, ಸಮಗ್ರ ರೈತಪರ ಹೋರಾಟ ವೇದಿಕೆ



