ಕೋಲಾರ: ರಾಜ್ಯದ ಮಾವಿನ ತವರು ಎಂದೇ ಖ್ಯಾತಿ ಪಡೆದಿರುವ ಕೋಲಾರ ಜಿಲ್ಲೆಯಲ್ಲಿ ಮಾವಿನ ಸೀಸನ್ ಆರಂಭವಾಗುತ್ತಿದ್ದಂತೆಯೇ ಬೆಲೆ ಕುಸಿತ ಕಂಡಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.
ಮಾವಿನ ಹಣ್ಣಿಗೆ ಬೆಂಬಲ ಬೆಲೆ ಘೋಷಿಸಬೇಕು ಅಥವಾ ಕನಿಷ್ಠ ಟನ್‌ಗೆ 10 ಸಾವಿರ ರೂಪಾಯಿ ನೀಡಬೇಕು ಎಂದು ಆಗ್ರಹಿಸಿ ಇಂದು ಕೋಲಾರ ಬಂದ್‌ಗೆ ಕರೆ ನೀಡಲಾಗಿದೆ.
ಕಳೆದೊಂದು ತಿಂಗಳಿನಿಂದ ಮಾವಿನ ಹಣ್ಣಿನ ಕೊಯ್ಲು ಆರಂಭವಾಗಿದ್ದರೂ, ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಲೆ ಸಿಗದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿ ಬೇಸಿಗೆಯ ತೀವ್ರ ಬಿಸಿಲು ಹಾಗೂ ಕಳೆದ ತಿಂಗಳು ಸುರಿದ ಆಲಿಕಲ್ಲು ಸಹಿತ ಮಳೆಯಿಂದಾಗಿ ಮಾವಿನ ಬೆಳೆ ಭಾರೀ ಹಾನಿಗೊಳಗಾಗಿದೆ. ಸುಮಾರು 60ರಿಂದ 70 ಶೇಕಡಾ ಫಸಲು ನಾಶವಾಗಿದ್ದು, ಉಳಿದ ಬೆಳೆಗೂ ಸಮರ್ಪಕ ಬೆಲೆ ದೊರೆಯುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ತೋತಾಪುರಿ, ಮಲಗೋವಾ, ಬೇನಿಷಾ, ರಸಪುರಿ, ಮಲ್ಲಿಕಾ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳು ಮಾರುಕಟ್ಟೆಯಲ್ಲಿ ಕೆಜಿಗೆ 10 ರೂಪಾಯಿ ದಾಟದ ಸ್ಥಿತಿ ನಿರ್ಮಾಣವಾಗಿದೆ. ಉತ್ಪಾದನಾ ವೆಚ್ಚವೂ ವಾಪಸ್ ಸಿಗದ ಪರಿಸ್ಥಿತಿಯಲ್ಲಿ ರೈತರು ಸರ್ಕಾರದ ಮಧ್ಯಸ್ಥಿಕೆಗೆ ಒತ್ತಾಯಿಸಿದ್ದಾರೆ.
ಮಾವು ಬೆಳೆಗಾರರು ಟನ್‌ಗೆ ಕನಿಷ್ಠ 10 ಸಾವಿರ ರೂಪಾಯಿ ಬೆಂಬಲ ಬೆಲೆ ಘೋಷಿಸಬೇಕು. ಇಲ್ಲವಾದರೆ ನೇರವಾಗಿ ರೈತರ ನೆರವಿಗೆ ಧಾವಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಸ್ಥಳೀಯ ಮಟ್ಟದಲ್ಲಿ ಮಾವು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿ ರೈತರಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಸುಮಾರು 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಅದರಲ್ಲೂ ಶ್ರೀನಿವಾಸಪುರ ತಾಲೂಕೊಂದರಲ್ಲೇ ಸುಮಾರು 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ತೋಟಗಳಿವೆ. ಇಲ್ಲಿನ ಬಹುತೇಕ ರೈತರು ಮಾವಿನ ಬೆಳೆಯನ್ನೇ ಜೀವನಾಧಾರವಾಗಿಸಿಕೊಂಡಿದ್ದಾರೆ.
ಈ ಬಾರಿ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾಗಿರುವುದರ ಜೊತೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡಿರುವುದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಬೆಂಬಲ ಬೆಲೆ ಘೋಷಿಸುವ ಮೂಲಕ ಮಾವು ಬೆಳೆಗಾರರ ನೆರವಿಗೆ ಬರಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿವೆ.



