HomeKarnataka Newsಮೆಣಸಿನಕಾಯಿ ದರ ಕುಸಿತ; ಕಟಾವು ಮಾಡದೇ ಗಿಡದಲ್ಲೇ ಬೆಳೆ ಬಿಟ್ಟ ರೈತರು!

ಮೆಣಸಿನಕಾಯಿ ದರ ಕುಸಿತ; ಕಟಾವು ಮಾಡದೇ ಗಿಡದಲ್ಲೇ ಬೆಳೆ ಬಿಟ್ಟ ರೈತರು!

For Dai;y Updates Join Our whatsapp Group

ಧಾರವಾಡ: ಜಿಲ್ಲೆಯಲ್ಲಿ ಈ ಬಾರಿ ಅನಾವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಳೆ ಕೈಕೊಟ್ಟರೂ ಬೋರ್‌ವೆಲ್‌, ಕೃಷಿ ಹೊಂಡ ಹಾಗೂ ತುಂತುರು ಹನಿ ನೀರಾವರಿ ಮೂಲಕ ಬೆಳೆಗಳನ್ನು ಉಳಿಸಿಕೊಂಡಿದ್ದ ರೈತರಿಗೆ ಇದೀಗ ಮಾರುಕಟ್ಟೆ ದರ ಕುಸಿತ ಮತ್ತೊಂದು ಆಘಾತ ನೀಡಿದೆ. ಉತ್ತಮವಾಗಿ ಬೆಳೆದ ಮೆಣಸಿನಕಾಯಿಗೆ ನಿರೀಕ್ಷಿತ ಬೆಲೆ ಸಿಗದ ಹಿನ್ನೆಲೆಯಲ್ಲಿ ಹಲವು ರೈತರು ಕಾಯಿ ಕಟಾವು ಮಾಡದೇ ಗಿಡದಲ್ಲೇ ಬಿಟ್ಟಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ ಸೇರಿದಂತೆ ಹಲವು ತಾಲೂಕುಗಳಲ್ಲಿ ಮೆಣಸಿನಕಾಯಿ ಪ್ರಮುಖ ಬೆಳೆಯಾಗಿದೆ. ಈ ಬಾರಿಯೂ ರೈತರು ಉತ್ತಮ ತಳಿಯ ಸಸಿಗಳನ್ನು ದುಬಾರಿ ಬೆಲೆಗೆ ಖರೀದಿಸಿ ನಾಟಿ ಮಾಡಿದ್ದರು. ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ಬೆಳೆಯೂ ಚೆನ್ನಾಗಿ ಬಂದಿತ್ತು. ಆದರೆ ಬಳಿಕ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ಬೋರ್‌ವೆಲ್‌ ಹಾಗೂ ಕೃಷಿ ಹೊಂಡಗಳಿಂದ ನೀರು ಹಾಯಿಸಿ ಬೆಳೆಯನ್ನು ಉಳಿಸಿಕೊಂಡಿದ್ದರು.

ಮೆಣಸಿನಕಾಯಿ ಬೆಳೆಗೆ ನೀರುಣಿಸಲು ಹಾಗೂ ನಿರ್ವಹಣೆ ಮಾಡಲು ರೈತರು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಇದೀಗ ಗಿಡಗಳು ಮೈತುಂಬಾ ಕಾಯಿಯನ್ನು ಬಿಟ್ಟಿದ್ದು, ಕಟಾವಿಗೆ ಸಿದ್ಧವಾಗಿವೆ. ಆದರೆ ಇದೇ ಸಮಯದಲ್ಲಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ದರದಲ್ಲಿ ತೀವ್ರ ಕುಸಿತ ಕಂಡುಬಂದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಸದ್ಯ ಕೆಲವೆಡೆ 10 ಕೆಜಿ ಮೆಣಸಿನಕಾಯಿಗೆ ಕೇವಲ 80ರಿಂದ 100 ರೂಪಾಯಿ ದರ ನಿಗದಿಯಾಗುತ್ತಿದೆ ಎನ್ನಲಾಗಿದೆ. ಈ ದರದಲ್ಲಿ ಮಾರಾಟ ಮಾಡಿದರೆ ರೈತರಿಗೆ ಕಟಾವು ವೆಚ್ಚವೂ ಸಿಗದ ಪರಿಸ್ಥಿತಿ ಎದುರಾಗಿದೆ. ಮೆಣಸಿನಕಾಯಿ ಕೀಳಲು ಕಾರ್ಮಿಕರಿಗೆ ಕೂಲಿ ನೀಡಬೇಕು. ಬಳಿಕ ವಾಹನದ ಮೂಲಕ ಮಾರುಕಟ್ಟೆಗೆ ಸಾಗಿಸಬೇಕು. ಹೀಗಾಗಿ ಮಾರುಕಟ್ಟೆ ದರಕ್ಕಿಂತ ಕಟಾವು ಮತ್ತು ಸಾಗಣೆ ವೆಚ್ಚವೇ ಹೆಚ್ಚಿನದಾಗುವ ಆತಂಕ ರೈತರಲ್ಲಿದೆ.

ಕನಿಷ್ಠ ಕೆಜಿಗೆ 25 ರೂಪಾಯಿ ದರ ಸಿಕ್ಕರೆ ಇದುವರೆಗೆ ಮಾಡಿರುವ ಖರ್ಚನ್ನಾದರೂ ಸರಿದೂಗಿಸಬಹುದು. ಅದಕ್ಕಿಂತ ಹೆಚ್ಚಿನ ದರ ಸಿಕ್ಕಾಗ ಮಾತ್ರ ರೈತರಿಗೆ ಲಾಭವಾಗಲಿದೆ. ಇಲ್ಲವಾದರೆ ಇಷ್ಟು ದಿನ ಬೆಳೆಗಾಗಿ ಮಾಡಿದ ಖರ್ಚು ವ್ಯರ್ಥವಾಗಲಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಈಗಾಗಲೇ ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿರುವ ರೈತರು ಮತ್ತೊಮ್ಮೆ ಕಾಯಿ ಕಟಾವಿಗೆ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಕಟಾವು ಮಾಡಿದ ಬಳಿಕವೂ ಸೂಕ್ತ ಬೆಲೆ ಸಿಗದಿದ್ದರೆ ನಷ್ಟ ಮತ್ತಷ್ಟು ಹೆಚ್ಚಾಗಲಿದೆ. ಇದೇ ಕಾರಣಕ್ಕೆ ಕೆಲ ರೈತರು ಕಾಯಿ ಕೀಳದೇ ಗಿಡದಲ್ಲೇ ಬಿಟ್ಟಿದ್ದಾರೆ.

ಇದೀಗ ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆಯಾಗುತ್ತಿರುವುದರಿಂದ ಬೆಳೆ ಕಟಾವು ಮಾಡಿ ಒಂದಷ್ಟು ಆದಾಯ ಗಳಿಸಿ, ಮುಂದಿನ ಬೆಳೆಗೆ ಸಿದ್ಧತೆ ಮಾಡಿಕೊಳ್ಳುವ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ ಮೆಣಸಿನಕಾಯಿಗೆ ಸೂಕ್ತ ಬೆಲೆ ಸಿಗದಿರುವುದು ಮುಂದಿನ ಬೆಳೆಯ ಯೋಜನೆಗೂ ಹೊಡೆತ ನೀಡುವ ಆತಂಕ ಮೂಡಿಸಿದೆ.

ಬೆಳೆ ಬಂದರೂ ಬೆಲೆ ಸಿಗದಿದ್ದರೆ ರೈತರ ಸಂಕಷ್ಟ ತಪ್ಪುವುದಿಲ್ಲ. ಉತ್ತಮ ಇಳುವರಿ ಪಡೆದಿದ್ದರೂ ಮಾರುಕಟ್ಟೆಯಲ್ಲಿ ಸೂಕ್ತ ದರ ದೊರೆಯದಿರುವುದು ಅನ್ನದಾತರ ಪಾಲಿಗೆ ಮತ್ತೊಂದು ಸಂಕಷ್ಟವಾಗಿ ಪರಿಣಮಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img