ಬೆಂಗಳೂರು: ರಾಜ್ಯದಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಲ್ಲಿ ಬ್ರ್ಯಾಂಡೆಡ್ ಔಷಧಿಗಳ ಮಾರಾಟ ನಡೆಯುತ್ತಿರುವ ಆರೋಪದ ಹಿನ್ನೆಲೆ ರಾಜ್ಯ ಔಷಧ ನಿಯಂತ್ರಣ ಇಲಾಖೆ ವ್ಯಾಪಕ ಪರಿಶೀಲನೆ ಕೈಗೊಂಡಿದ್ದು, ನಿಯಮ ಉಲ್ಲಂಘನೆ ಕಂಡುಬಂದ 133 ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.
ಕಳೆದ ಎರಡು ದಿನಗಳ ಅವಧಿಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿರುವ 172 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳ ಮೇಲೆ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 133 ಕೇಂದ್ರಗಳಲ್ಲಿ ಬ್ರ್ಯಾಂಡೆಡ್ ಔಷಧಿಗಳ ಮಾರಾಟ ನಡೆದಿರುವುದು ಬೆಳಕಿಗೆ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ 1,200ಕ್ಕೂ ಹೆಚ್ಚು ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈಗಾಗಲೇ 172 ಕೇಂದ್ರಗಳ ಪರಿಶೀಲನೆ ಪೂರ್ಣಗೊಂಡಿದ್ದು, ಉಳಿದ ಕೇಂದ್ರಗಳಲ್ಲಿಯೂ ಹಂತ ಹಂತವಾಗಿ ತಪಾಸಣೆ ನಡೆಸಲು ಇಲಾಖೆ ಸಿದ್ಧತೆ ನಡೆಸಿದೆ.
ನಿಯಮ ಉಲ್ಲಂಘನೆ ಆರೋಪ ಎದುರಿಸುತ್ತಿರುವ 133 ಜನೌಷಧಿ ಕೇಂದ್ರಗಳ ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ಜನೌಷಧಿ ಕೇಂದ್ರಗಳಲ್ಲಿ ಬ್ರ್ಯಾಂಡೆಡ್ ಔಷಧಿಗಳನ್ನು ಏಕೆ ಮಾರಾಟ ಮಾಡಲಾಗಿದೆ ಎಂಬುದರ ಕುರಿತು ಸಮರ್ಪಕ ವಿವರಣೆ ನೀಡುವಂತೆ ಸೂಚಿಸಲಾಗಿದೆ.
ನೋಟಿಸ್‌ಗೆ ಸಮಂಜಸ ಉತ್ತರ ನೀಡದಿದ್ದಲ್ಲಿ ಅಥವಾ ನಿಯಮ ಉಲ್ಲಂಘನೆ ದೃಢಪಟ್ಟಲ್ಲಿ ಸಂಬಂಧಿತ ಕೇಂದ್ರಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಔಷಧ ನಿಯಂತ್ರಣ ಇಲಾಖೆ ಎಚ್ಚರಿಕೆ ನೀಡಿದೆ.
ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಜೆನೆರಿಕ್ ಔಷಧಿಗಳನ್ನು ಒದಗಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಜನೌಷಧಿ ಕೇಂದ್ರಗಳಲ್ಲಿ ಬ್ರ್ಯಾಂಡೆಡ್ ಔಷಧಿಗಳ ಮಾರಾಟ ಪತ್ತೆಯಾಗಿರುವುದು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಇಲಾಖೆ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜನೌಷಧಿ ಕೇಂದ್ರಗಳ ಮೇಲೂ ಕಟ್ಟುನಿಟ್ಟಿನ ನಿಗಾ ವಹಿಸಲು ನಿರ್ಧರಿಸಿದೆ.



