ಚಿಕ್ಕೋಡಿ: ತಮ್ಮ ಅಳಿಯ ವೈ. ಮಂಜುನಾಥ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ನಡೆಸಿರುವ ದಾಳಿಗೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ದಾಳಿಯ ಹಿಂದಿನ ನಿಖರ ಕಾರಣಗಳ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಹಾರೂಗೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಕರಣದ ಸಂಪೂರ್ಣ ಮಾಹಿತಿ ಲಭ್ಯವಾದ ಬಳಿಕವೇ ಈ ಕುರಿತು ಅಧಿಕೃತವಾಗಿ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದ್ದಾರೆ.
ಇ.ಡಿ ದಾಳಿ ಸಾಮಾನ್ಯ ತನಿಖಾ ಪ್ರಕ್ರಿಯೆಯ ಭಾಗವಾಗಿ ನಡೆದಿರಬಹುದು. ಆದರೆ, ಅಧಿಕಾರಿಗಳು ಯಾವ ಕಾರಣಕ್ಕಾಗಿ ದಾಳಿ ನಡೆಸಿದ್ದಾರೆ ಹಾಗೂ ತನಿಖೆಯ ವ್ಯಾಪ್ತಿ ಏನು ಎಂಬುದು ಈ ಹಂತದಲ್ಲಿ ತಿಳಿದಿಲ್ಲ ಎಂದು ಅವರು ಹೇಳಿದರು.
ಅಧಿಕಾರಿಗಳು ಯಾವ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ, ಯಾವ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ ಎಂಬುದರ ಬಗ್ಗೆಯೂ ಸ್ಪಷ್ಟ ಮಾಹಿತಿ ಇಲ್ಲ. ಎಷ್ಟು ಸ್ಥಳಗಳಲ್ಲಿ ದಾಳಿ ನಡೆದಿದೆ ಎಂಬುದೂ ಇನ್ನೂ ಖಚಿತವಾಗಿಲ್ಲ ಎಂದು ಜಾರಕಿಹೊಳಿ ತಿಳಿಸಿದರು.
ಏಳು ಕಡೆ ದಾಳಿ ನಡೆದಿದೆಯೋ, ಹತ್ತು ಕಡೆ ನಡೆದಿದೆಯೋ ಎಂಬ ಮಾಹಿತಿಯೂ ನನಗೆ ಬಂದಿಲ್ಲ. ಸಂಬಂಧಪಟ್ಟವರಿಂದ ಸಂಪೂರ್ಣ ಮಾಹಿತಿ ಸಿಕ್ಕ ಬಳಿಕವೇ ಈ ಬಗ್ಗೆ ಮಾತನಾಡುತ್ತೇನೆ. ಸದ್ಯಕ್ಕೆ ಯಾವುದೇ ಊಹಾಪೋಹಗಳಿಗೆ ಅವಕಾಶ ನೀಡಲು ಇಷ್ಟಪಡುವುದಿಲ್ಲ. ನಾಳೆಯವರೆಗೆ ಕಾಯೋಣ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.



