ಚಿಕ್ಕಮಗಳೂರು: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಗೃಹಿಣಿಯೊಬ್ಬರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ₹30 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಬ್ಲ್ಯಾಕ್‌ಮೇಲ್‌ಗೆ ಮಣಿಯದ ಹಿನ್ನೆಲೆಯಲ್ಲಿ ಆರೋಪಿಗಳು ಎಡಿಟ್ ಮಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಇದರಿಂದ ತೀವ್ರ ಮಾನಸಿಕ ಆಘಾತಕ್ಕೊಳಗಾದ ಗೃಹಿಣಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿದುಬಂದಿದೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪೊಲೀಸ್ ಮಾಹಿತಿ ಪ್ರಕಾರ, ಆರೋಪಿಗಳು ಎಐ ತಂತ್ರಜ್ಞಾನ ಬಳಸಿ ಗೃಹಿಣಿಯ ಫೋಟೋಗಳನ್ನು ವಿಕೃತವಾಗಿ ಪರಿವರ್ತಿಸಿದ್ದಾರೆ. ಬಳಿಕ ಆ ಫೋಟೋಗಳನ್ನು ಮಹಿಳೆಯ ಮೊಬೈಲ್‌ಗೆ ಕಳುಹಿಸಿ ₹30 ಲಕ್ಷ ನೀಡುವಂತೆ ಒತ್ತಾಯಿಸಿದ್ದಾರೆ. ಹಣ ನೀಡದಿದ್ದರೆ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಆದರೆ ಗೃಹಿಣಿ ಹಾಗೂ ಅವರ ಕುಟುಂಬಸ್ಥರು ಈ ಬೆದರಿಕೆಗೆ ಮಣಿಯದಿದ್ದಾಗ, ಆರೋಪಿಗಳು ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಖಾತೆ ತೆರೆದು ಎಡಿಟ್ ಮಾಡಿದ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಅಲ್ಲದೆ, ಮಹಿಳೆಯ ಕುರಿತು ಅವಹೇಳನಕಾರಿ ಹಾಗೂ ಅಶ್ಲೀಲ ಮಾಹಿತಿಯನ್ನು ಪ್ರಕಟಿಸಿರುವ ಆರೋಪವೂ ಕೇಳಿಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ತನ್ನ ಹೆಸರಿನಲ್ಲಿ ಹರಿದಾಡಿದ ವಿಕೃತ ಚಿತ್ರಗಳನ್ನು ಕಂಡು ಗೃಹಿಣಿ ತೀವ್ರವಾಗಿ ಮನನೊಂದಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ಸಂತ್ರಸ್ತೆಯ ಪತಿ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾವಿಕೆರೆ ಗ್ರಾಮದ ಅಕ್ಷಯ್ ಹಾಗೂ ಸಾಹುಲ್ ಹಮೀದ್ ಎಂಬ ಇಬ್ಬರು ಯುವಕರ ವಿರುದ್ಧ ನೇರ ಆರೋಪ ಮಾಡಲಾಗಿದೆ. ಗೃಹಿಣಿಯ ಮೊಬೈಲ್‌ಗೆ ಬಂದಿದ್ದ ಸಂದೇಶಗಳು ಹಾಗೂ ಸಂಪರ್ಕ ಸಂಖ್ಯೆಗಳ ಆಧಾರದ ಮೇಲೆ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.
ದೂರಿನಲ್ಲಿ, ಇದೇ ಆರೋಪಿಗಳು ಈ ಹಿಂದೆ ಕೂಡ ಇತರ ಮಹಿಳೆಯರನ್ನು ಇದೇ ರೀತಿಯಲ್ಲಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಈ ರೀತಿಯ ಕೃತ್ಯಗಳ ಹಿಂದೆ ಸಂಘಟಿತ ಜಾಲವಿರುವ ಸಾಧ್ಯತೆಯನ್ನೂ ಕುಟುಂಬಸ್ಥರು ಉಲ್ಲೇಖಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಲಕ್ಕವಳ್ಳಿ ಪೊಲೀಸರು ತನಿಖೆ ಆರಂಭಿಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಹಿಳೆಯ ಗೌರವಕ್ಕೆ ಧಕ್ಕೆ ಉಂಟುಮಾಡಿ, ಮಾನಸಿಕ ಹಿಂಸೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.



