ಬೆಂಗಳೂರು: ಕೆಆರ್ ಪುರಂನಲ್ಲಿ ನಡೆದಿದ್ದ ತ್ರಿವಳಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಶ್ವೇತಾಳನ್ನು ಪೊಲೀಸರು ಪುದುಚೇರಿಯಲ್ಲಿ ಬಂಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಹಾಗೂ ಆಕೆಯ ಪ್ರಿಯಕರ ಕೆನತ್‌ಗಾಗಿ ವಿಶೇಷ ತಂಡಗಳು ಶೋಧ ಮುಂದುವರಿಸಿವೆ.
ಪೋಷಕರು ಹಾಗೂ ತಂಗಿಯನ್ನು ಹತ್ಯೆ ಮಾಡಿದ ಬಳಿಕ ಶ್ವೇತಾ ಮತ್ತು ಕೆನತ್ ಪರಾರಿಯಾಗಿದ್ದರು. ಇವರ ಪತ್ತೆಗಾಗಿ ವೈಟ್‌ಫೀಲ್ಡ್ ವಿಭಾಗದ ಆರು ವಿಶೇಷ ಪೊಲೀಸ್ ತಂಡಗಳು ಕಳೆದ ಎರಡು ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದವು.
ಆರೋಪಿಗಳ ನಿವಾಸದಲ್ಲಿ ಪರಿಶೀಲನೆ ನಡೆಸಿದ ವೇಳೆ ಶ್ವೇತಾ ಬರೆದಿದ್ದ ವೈಯಕ್ತಿಕ ಡೈರಿ ಪೊಲೀಸರಿಗೆ ಪತ್ತೆಯಾಗಿದೆ. ಡೈರಿಯಲ್ಲಿ “I am sad”, “I am lonely”, “Feeling loved”, “I am depressed”, “I am superior” ಸೇರಿದಂತೆ ಆಕೆಯ ಮಾನಸಿಕ ಸ್ಥಿತಿಯನ್ನು ಪ್ರತಿಬಿಂಬಿಸುವ ಹಲವು ಬರಹಗಳು ಕಂಡುಬಂದಿವೆ. ಡೈರಿ ಸೇರಿದಂತೆ ಹಲವು ಮಹತ್ವದ ದಾಖಲೆಗಳು ಮತ್ತು ಇತರೆ ಸಾಕ್ಷ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ, ಶ್ವೇತಾ ಮತ್ತು ಕೆನತ್ ನ್ಯೂ ಹಾರಿಜನ್ ಕಾಲೇಜಿನಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದಾಗ ಪರಿಚಯವಾಗಿ ಬಳಿಕ ಪ್ರೀತಿಸುತ್ತಿದ್ದರು. ಶಿಕ್ಷಣ ಮುಗಿದ ನಂತರ ಉದ್ಯೋಗಕ್ಕೆ ಸೇರಿದ್ದ ಇಬ್ಬರೂ ಬಳಿಕ ಕೆಲಸ ತೊರೆದು ಸ್ವಂತ ಉದ್ಯಮ ಆರಂಭಿಸುವ ಉದ್ದೇಶದಿಂದ ಶ್ವೇತಾಳ ಪೋಷಕರ ಹೆಸರಿನಲ್ಲಿ ಖಾಸಗಿ ಬ್ಯಾಂಕ್‌ನಿಂದ ಸುಮಾರು ₹30 ಲಕ್ಷ ಸಾಲ ಪಡೆದಿದ್ದರು ಎನ್ನಲಾಗಿದೆ.
ಸಾಲದ ಕಂತು ಹಾಗೂ ಬಡ್ಡಿ ಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕ್‌ನಿಂದ ನೋಟಿಸ್ ಬಂದಾಗಲೇ ಈ ವಿಚಾರ ಶ್ವೇತಾಳ ಪೋಷಕರಿಗೆ ತಿಳಿದಿದ್ದು, ಅವರು ಪ್ರಶ್ನೆ ಮಾಡಿದಾಗ ಕುಟುಂಬದಲ್ಲಿ ತೀವ್ರ ಕಲಹ ಉಂಟಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಪೋಷಕರ ವಿರೋಧ ಹಾಗೂ ಇತರೆ ವೈಯಕ್ತಿಕ ಕಾರಣಗಳಿಂದ ಮಂಗಳವಾರ ರಾತ್ರಿ ಮನೆಯಲ್ಲಿ ಗಲಾಟೆ ನಡೆದಿದ್ದು, ಅದರ ವೇಳೆ ಶ್ವೇತಾ ಮತ್ತು ಕೆನತ್ ಸೇರಿ ತಂದೆ, ತಾಯಿ ಹಾಗೂ ತಂಗಿಗೆ 30ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಸ್ತುತ ಬಂಧಿತೆಯಾಗಿರುವ ಶ್ವೇತಾಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಪರಾರಿಯಾಗಿರುವ ಕೆನತ್‌ನ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.



