ಬೆಂಗಳೂರು: ಆಸ್ತಿ ವಿಚಾರವಾಗಿ ಉಂಟಾದ ಜಗಳದ ವೇಳೆ ಮಗಳು ತನ್ನ ಮಗನೊಂದಿಗೆ ಸೇರಿ ಹೆತ್ತ ತಾಯಿಯನ್ನೇ ಹತ್ಯೆ ಮಾಡಿರುವ ಬೆಚ್ಚಿಬೀಳಿಸುವ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಸುಭಾಷ್ ನಗರದಲ್ಲಿ ನಡೆದಿದೆ.
75 ವರ್ಷದ ಜಯಮ್ಮ ಹತ್ಯೆಯಾದ ವೃದ್ಧೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮಗಳು ಭಾಗ್ಯಲಕ್ಷ್ಮಿ ಹಾಗೂ ಮೊಮ್ಮಗ ಕುಶಾಲ್ ಅವರನ್ನು ಕೆಂಗೇರಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಕುಟುಂಬದ ಸದಸ್ಯರು ಮದ್ಯದ ಚಟಕ್ಕೆ ಒಳಗಾಗಿದ್ದು, ಆಸ್ತಿ ಮಾರಾಟದ ಹಣದ ವಿಚಾರವಾಗಿ ಹಲವು ದಿನಗಳಿಂದ ಕುಟುಂಬದಲ್ಲಿ ಕಲಹ ನಡೆಯುತ್ತಿತ್ತು.
ಭಾನುವಾರ ರಾತ್ರಿ ಆಸ್ತಿ ಮಾರಾಟದ ಹಣದ ವಿಚಾರವಾಗಿ ಜಯಮ್ಮ ಮತ್ತು ಭಾಗ್ಯಲಕ್ಷ್ಮಿ ನಡುವೆ ವಾಗ್ವಾದ ನಡೆದಿದೆ. ಜಗಳ ತೀವ್ರಗೊಂಡಾಗ ಭಾಗ್ಯಲಕ್ಷ್ಮಿ ಅವರ ಮಗ ಕುಶಾಲ್ ಕೂಡ ಮಧ್ಯಪ್ರವೇಶಿಸಿದ್ದಾನೆ. ಈ ವೇಳೆ ಮನೆಯಲ್ಲಿದ್ದ ಮುದ್ದೆ ಮಾಡುವ ಮರದ ಕೋಲಿನಿಂದ ಜಯಮ್ಮ ಅವರ ತಲೆಗೆ ಬಲವಾಗಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ನಡೆದ ಬಳಿಕ ತಾಯಿ-ಮಗ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ. ಆದರೆ ಸ್ವಲ್ಪ ಸಮಯದ ನಂತರ ಕುಶಾಲ್ ತನ್ನ ಸ್ನೇಹಿತನಿಗೆ ಕರೆ ಮಾಡಿ, ಅಜ್ಜಿ ಮೃತಪಟ್ಟಿದ್ದಾರೆ, ಎಣ್ಣೆ (ಮದ್ಯ) ತೆಗೆದುಕೊಂಡು ಬಾ ಎಂದು ಹೇಳಿದ್ದಾನೆ ಎನ್ನಲಾಗಿದೆ.
ಸ್ನೇಹಿತ ಮನೆಗೆ ಬಂದಾಗ, ಕುಶಾಲ್ ಮೃತದೇಹ ಮನೆಯಲ್ಲೇ ಇದ್ದರೂ ಮದ್ಯ ಸೇವಿಸಿ ಪಾರ್ಟಿ ಮಾಡುವಂತೆ ವರ್ತಿಸಿದ್ದಾನೆ. ಇದರಿಂದ ಅನುಮಾನಗೊಂಡ ಸ್ನೇಹಿತ ಜಯಮ್ಮ ಅವರ ಮೃತದೇಹವನ್ನು ಕಂಡು ಬೆಚ್ಚಿಬಿದ್ದು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಕೆಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. ಆರೋಪಿಗಳಾದ ಭಾಗ್ಯಲಕ್ಷ್ಮಿ ಹಾಗೂ ಕುಶಾಲ್ ಅವರನ್ನು ಬಂಧಿಸಿರುವ ಪೊಲೀಸರು, ಕೊಲೆಗೆ ನಿಖರ ಕಾರಣ ಮತ್ತು ಇತರೆ ಹಿನ್ನೆಲೆ ಕುರಿತು ತನಿಖೆ ಮುಂದುವರಿಸಿದ್ದಾರೆ.



