ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶಾಲೆ ಯಾವುದೇ ಇರಲಿ, ಅಲ್ಲಿ ವಿದ್ಯಾರ್ಥಿಗಳೇ ಜೀವಾಳ. ಅವರ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವುದೇ ಶಿಕ್ಷಕರ ಪ್ರಮುಖ ಕರ್ತವ್ಯ ಎಂದು ವರ್ಗಾವಣೆಗೊಂಡ ಮುಖ್ಯ ಶಿಕ್ಷಕ ಬಿ.ಆರ್. ಗದಗಿನ ಹೇಳಿದರು.
ಸಮೀಪದ ಜಕ್ಕಲಿ ಗ್ರಾಮದ ಎಸ್ಎಜೆಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ತಮ್ಮ ವರ್ಗಾವಣೆ ನಿಮಿತ್ತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸನ್ಮಾನ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಳೆದ ಒಂಬತ್ತು ವರ್ಷಗಳಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದು, ಶಾಲೆಯ ಶಿಸ್ತು, ಶೈಕ್ಷಣಿಕ ಪ್ರಗತಿ ಹಾಗೂ ಭೌತಿಕ ಅಭಿವೃದ್ಧಿಗೆ ಶಿಕ್ಷಕರು, ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಹಲವಾರು ಕೆಲಸಗಳನ್ನು ಕೈಗೊಳ್ಳಲು ಸಾಧ್ಯವಾಯಿತು. ಶಾಲೆಗೆ ಸಣ್ಣ ಮಕ್ಕಳಾಗಿ ಬಂದ ವಿದ್ಯಾರ್ಥಿಗಳು ಇಂದು ಉತ್ತಮ ಸಾಧನೆ ಮಾಡಿ ಜೀವನದಲ್ಲಿ ಮುನ್ನಡೆಯುತ್ತಿರುವುದನ್ನು ನೋಡುವುದೇ ನನ್ನ ಪಾಲಿನ ದೊಡ್ಡ ಸಂತೋಷ ಮತ್ತು ಸೌಭಾಗ್ಯ ಎಂದು ಭಾವುಕರಾದರು.
ಹಿಂದಿ ಶಿಕ್ಷಕಿ ಗೌರಮ್ಮ ಮಾತನಾಡಿ, ಗದಗಿನ ಸರ್ ಅವರು ಶಿಕ್ಷಕರಿಗೆ ತಂದೆಯಂತೆ, ಅಣ್ಣನಂತೆ ಮಾರ್ಗದರ್ಶನ ನೀಡುತ್ತಿದ್ದರು. ಸಿಬ್ಬಂದಿಗೆ ಸದಾ ಪ್ರೋತ್ಸಾಹ ನೀಡಿ ಉತ್ತಮ ಕಾರ್ಯ ವಾತಾವರಣ ನಿರ್ಮಿಸಿದ್ದರು. ಅವರ ಸೇವೆ ಮತ್ತು ಮಾರ್ಗದರ್ಶನವನ್ನು ಮರೆಯಲು ಸಾಧ್ಯವಿಲ್ಲ ಎಂದರು.
ಪತ್ರಕರ್ತ ಸಂಗಮೇಶ ಮೆಣಸಿಗಿ ಮಾತನಾಡಿ, ಒಂದು ಶಾಲೆಯ ಬೆಳವಣಿಗೆಯಲ್ಲಿ ಮುಖ್ಯ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಜಕ್ಕಲಿ ಶಾಲೆಯ ಅಭಿವೃದ್ಧಿಗೆ ಗದಗಿನ ಸರ್ ಅವರ ಕೊಡುಗೆ ಅಪಾರವಾಗಿದ್ದು, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಅವರ ಸೇವೆ ಅನುಪಮವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಶಾರದಮ್ಮ ಮಾತನಾಡಿ, “ಮಾತಿಗಿಂತ ಕೃತಿ ಮುಖ್ಯ” ಎಂಬುದನ್ನು ಗದಗಿನ ಅವರು ತಮ್ಮ ಕಾರ್ಯವೈಖರಿ ಮತ್ತು ಸೇವಾ ಮನೋಭಾವದ ಮೂಲಕ ಸಾಬೀತುಪಡಿಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆದು ಶಾಲೆಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ನೆಹರೂ ಮನೋಳಿ, ಆರ್.ಡಿ. ಬಡಿಗೇರ, ದೈಹಿಕ ಶಿಕ್ಷಣ ಶಿಕ್ಷಕಿ ವಿ.ಎಸ್. ಗುಗ್ಗರಿ, ಅತಿಥಿ ಶಿಕ್ಷಕಿಯರಾದ ದೀಪಾ ತುಕ್ಕೋಜಿ, ಪ್ರಿಯಾಂಕಾ ಕಲಹಾಳ, ವಿದ್ಯಾರ್ಥಿಗಳು ಹಾಗೂ ಅಡುಗೆ ಸಿಬ್ಬಂದಿ ಉಪಸ್ಥಿತರಿದ್ದರು.
ಶಿಕ್ಷಕ ವಿ.ವಿ. ಅಣ್ಣಿಗೇರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಯು.ಎಸ್. ಕಣವಿ ವಂದಿಸಿದರು.
“ಈ ಶಾಲೆಯಲ್ಲಿ ಕಳೆದ ಒಂಬತ್ತು ವರ್ಷಗಳ ಸೇವೆ ನನ್ನ ಬದುಕಿನ ಅಮೂಲ್ಯ ಅಧ್ಯಾಯ. ವಿದ್ಯಾರ್ಥಿಗಳ ಪ್ರೀತಿ, ಶಿಕ್ಷಕರ ಸಹಕಾರ ಮತ್ತು ಗ್ರಾಮಸ್ಥರ ವಿಶ್ವಾಸವನ್ನು ಎಂದಿಗೂ ಮರೆಯುವುದಿಲ್ಲ.”
– ಬಿ.ಆರ್. ಗದಗಿನ, ವರ್ಗಾವಣೆಗೊಂಡ ಮುಖ್ಯ ಶಿಕ್ಷಕರು



