ಉಡುಪಿ: ಉದ್ಯಾವರ ಸಮೀಪದ ಪಾಪನಾಶಿನಿ ಸೇತುವೆಯಿಂದ ನದಿಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.
ಪಿತ್ರೋಡಿ ನಿವಾಸಿ ಹರ್ಷಿತ್ ಶೆಟ್ಟಿ (28) ಮೃತ ಯುವಕನಾಗಿದ್ದು, ಬೆಳಗ್ಗೆ ಕ್ರಿಕೆಟ್ ಆಡಲು ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದನು. ಆದರೆ, ಸಂಜೆವರೆಗೂ ಮನೆಗೆ ವಾಪಸ್ಸಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡು ಹುಡುಕಾಟ ಆರಂಭಿಸಿದ್ದರು.
ಈ ವೇಳೆ ಪಾಪನಾಶಿನಿ ಸೇತುವೆ ಮೇಲೆಯೇ ಹರ್ಷಿತ್ ದ್ವಿಚಕ್ರ ವಾಹನ ಪತ್ತೆಯಾಗಿತ್ತು. ಜೊತೆಗೆ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಅನುಮಾನ ಮತ್ತಷ್ಟು ಬಲವಾಗಿತ್ತು. ತಕ್ಷಣ ಸ್ಥಳೀಯರು ಹಾಗೂ ಮುಳುಗು ತಜ್ಞ ಈಶ್ವರ ಮಲ್ಪೆ ನೇತೃತ್ವದಲ್ಲಿ ನದಿಯಲ್ಲಿ ಶೋಧ ಕಾರ್ಯ ಕೈಗೊಳ್ಳಲಾಯಿತು.
ಸಂಜೆಯ ವೇಳೆಗೆ ನದಿಯಲ್ಲಿ ಹರ್ಷಿತ್ ಮೃತದೇಹ ಪತ್ತೆಯಾಗಿದ್ದು, ಬಳಿಕ ಅದನ್ನು ಮೇಲಕ್ಕೆತ್ತಲಾಯಿತು. ಹರ್ಷಿತ್ ಮಲ್ಪೆಯಲ್ಲಿರುವ ಸೊಸೈಟಿಯೊಂದರಲ್ಲಿ ಉದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



