ಇಸ್ಲಾಮಾಬಾದ್: ಪಾಕಿಸ್ತಾನದ ಕರಾಚಿ ಕರಾವಳಿಯ ಸಮೀಪ ಅರಬ್ಬಿ ಸಮುದ್ರದ ಮೇಲೆ ಹಾರಾಟ ನಡೆಸುತ್ತಿದ್ದ ಕಾರ್ಗೋ ವಿಮಾನವೊಂದು ನಿಗೂಢವಾಗಿ ನಾಪತ್ತೆಯಾಗಿದ್ದು, ಪಾಕಿಸ್ತಾನ ನೌಕಾಪಡೆ ಹಾಗೂ ರಕ್ಷಣಾ ಸಂಸ್ಥೆಗಳು ಸಮುದ್ರದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿವೆ.
ಐವರು ಸಿಬ್ಬಂದಿಯನ್ನು ಹೊತ್ತಿದ್ದ ಬೋಯಿಂಗ್ 737 ಕಾರ್ಗೋ ವಿಮಾನವು ಮಂಗಳವಾರ ರಾತ್ರಿ ಯುಎಇಯ ಶಾರ್ಜಾದಿಂದ ಟೇಕ್‌ಆಫ್ ಆಗಿತ್ತು. ಸುಮಾರು ಎರಡು ಗಂಟೆಗಳ ಹಾರಾಟದ ಬಳಿಕ ಕರಾಚಿ ಕರಾವಳಿ ಸಮೀಪ ರೇಡಾರ್ ಸಂಪರ್ಕ ಕಳೆದುಕೊಂಡಿದ್ದು, ಬಳಿಕ ವಿಮಾನದ ಯಾವುದೇ ಸುಳಿವು ಸಿಕ್ಕಿಲ್ಲ.
ಸ್ಥಳೀಯ ಸಮಯ ರಾತ್ರಿ 9:18ರ ಸುಮಾರಿಗೆ ವಿಮಾನದಲ್ಲಿ ನ್ಯಾವಿಗೇಷನ್ ವ್ಯವಸ್ಥೆಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ ಎಂದು ಪೈಲಟ್ ಮಾಹಿತಿ ನೀಡಿದ್ದು, ಕರಾಚಿ ಏರ್ ಟ್ರಾಫಿಕ್ ಕಂಟ್ರೋಲ್ ಕೇಂದ್ರದಿಂದ ಮಾರ್ಗದರ್ಶನ ಪಡೆಯಲಾಗಿತ್ತು. ಆದರೆ ಸಂಪರ್ಕ ಕಡಿತಗೊಳ್ಳುವ ಮುನ್ನ ಯಾವುದೇ ತುರ್ತು ಸಂದೇಶ ಅಥವಾ ಅಪಾಯದ ಸಂಕೇತವನ್ನು ವಿಮಾನದಿಂದ ರವಾನಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಂತ್ರಿಕ ದೋಷ ಅಥವಾ ಪ್ರತಿಕೂಲ ಹವಾಮಾನದಿಂದ ಈ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ವಿಮಾನ ಅರಬ್ಬಿ ಸಮುದ್ರದಲ್ಲೇ ಪತನಗೊಂಡಿರುವ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ವಿಮಾನ ಕೊನೆಯದಾಗಿ ಕಾಣಿಸಿಕೊಂಡ ಪ್ರದೇಶದಲ್ಲಿ ಪಾಕಿಸ್ತಾನ ನೌಕಾಪಡೆ, ಕರಾವಳಿ ಕಾವಲು ಪಡೆ ಹಾಗೂ ಹೆಲಿಕಾಪ್ಟರ್‌ಗಳ ಮೂಲಕ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಸಮುದ್ರದಲ್ಲಿ ಬಿರುಗಾಳಿ ಮತ್ತು ಎತ್ತರದ ಅಲೆಗಳು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿವೆ.
ವಿಮಾನದಲ್ಲಿದ್ದ ಸರಕುಗಳ ವಿವರವನ್ನು ಸದ್ಯಕ್ಕೆ ಅಧಿಕಾರಿಗಳು ಬಹಿರಂಗಪಡಿಸಿಲ್ಲ. ವಿಮಾನದ ಪತ್ತೆ ಹಾಗೂ ಘಟನೆಯ ನಿಖರ ಕಾರಣ ತಿಳಿಯಲು ತನಿಖೆ ಮುಂದುವರೆದಿದೆ.



