ವಿಜಯಸಾಕ್ಷಿ ಸುದ್ದಿ, ಗದಗ: ಪರಿಸರ ಸಂರಕ್ಷಣೆ ಸರ್ಕಾರದ ಹೊಣೆ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಜವಾಬ್ದಾರಿಯೂ ಆಗಿದೆ ಎಂಬ ಸಂದೇಶದೊಂದಿಗೆ ರೋಟರಿ ಜಿಲ್ಲಾ 3170 ವತಿಯಿಂದ ಗದಗ ಜಿಲ್ಲೆಯಾದ್ಯಂತ ಬೃಹತ್ ವೃಕ್ಷಾರೋಪಣ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಜುಲೈ 12ರಿಂದ 19ರವರೆಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯಲಿರುವ ಈ ಹಸಿರು ಅಭಿಯಾನಕ್ಕೆ ಗದಗ-ಬೆಟಗೇರಿ ರೋಟರಿ ಕ್ಲಬ್‌ನ ಐಕೇರ್ ಸೆಂಟರ್ ಆವರಣದಲ್ಲಿ ಸಸಿ ನೆಟ್ಟು, ನೀರೆರೆಯುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.
ಗದಗ-ಬೆಟಗೇರಿ ರೋಟರಿ ಕ್ಲಬ್ ಅಧ್ಯಕ್ಷ ಡಾ. ಪ್ರದೀಪ ಉಗಲಾಟ ಮಾತನಾಡಿ, ಹವಾಮಾನ ವೈಪರೀತ್ಯ, ಅರಣ್ಯ ನಾಶ ಹಾಗೂ ಪರಿಸರ ಅಸಮತೋಲನದಂತಹ ಸವಾಲುಗಳನ್ನು ಎದುರಿಸಲು ವೃಕ್ಷಾರೋಪಣವೇ ಪರಿಣಾಮಕಾರಿ ಮಾರ್ಗವಾಗಿದೆ ಎಂದರು.
ರೋಟರಿ ಕೇವಲ ಸಸಿ ನೆಡುವ ಕಾರ್ಯಕ್ರಮಕ್ಕೆ ಸೀಮಿತವಾಗದೇ, ನೆಟ್ಟ ಗಿಡಗಳ ಸಂರಕ್ಷಣೆಗೆ ವಿಶೇಷ ಯೋಜನೆ ರೂಪಿಸಿದೆ. ನಿಯಮಿತ ನೀರುಣಿಕೆ, ಬೇಲಿ ಅಳವಡಿಕೆ ಹಾಗೂ ನಿರಂತರ ಮೇಲ್ವಿಚಾರಣೆಯ ಮೂಲಕ ಗಿಡಗಳನ್ನು ಮರಗಳಾಗಿ ಬೆಳೆಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಾದ್ಯಂತ ನಡೆಯಲಿರುವ ಅಭಿಯಾನದಲ್ಲಿ ರೋಟರಾಕ್ಟ್, ಇಂಟರಾಕ್ಟ್ ಸದಸ್ಯರು, ವಿದ್ಯಾರ್ಥಿಗಳು, ಶಿಕ್ಷಕರು, ಸ್ವಯಂಸೇವಾ ಸಂಸ್ಥೆಗಳು ಹಾಗೂ ಪರಿಸರ ಪ್ರೇಮಿಗಳು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಾ. ಧನೇಶ ದೇಸಾಯಿ, ಡಾ. ರಾಜಶೇಖರ ಬಳ್ಳಾರಿ, ಸುರೇಶ ಕುಂಬಾರ ಹಾಗೂ ಮಂಜುಳಾ ಅಕ್ಕಿ ಮಾತನಾಡಿ, ಪರಿಸರ ಉಳಿಸುವ ಕೆಲಸದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಅರಣ್ಯಾಧಿಕಾರಿ ಎನ್. ಜಯರಾಮ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರೋಟರಿ ಕೈಗೊಂಡಿರುವ ವೃಕ್ಷಾರೋಪಣ ಅಭಿಯಾನಕ್ಕೆ ಸಮಾಜದ ಎಲ್ಲ ವರ್ಗದವರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಸಂತೋಷ ಅಕ್ಕಿ ಅತಿಥಿಗಳನ್ನು ಪರಿಚಯಿಸಿದರು. ಬಾಲಕೃಷ್ಣ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಕ್ಲಬ್ ಕಾರ್ಯದರ್ಶಿ ಅಕ್ಷಯ್ ಶೆಟ್ಟಿ ವಂದಿಸಿದರು. ರೋಟರಿ ಕ್ಲಬ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
“ಗಿಡ ನೆಡುವುದಷ್ಟೇ ಸಾಕಾಗುವುದಿಲ್ಲ. ಅದು ಮರವಾಗಿ ಬೆಳೆಯುವವರೆಗೆ ಅದರ ಸಂರಕ್ಷಣೆ ಮತ್ತು ಪೋಷಣೆಯ ಜವಾಬ್ದಾರಿಯನ್ನೂ ನಾವು ವಹಿಸಿಕೊಳ್ಳಬೇಕು.”
– ಡಾ. ಪ್ರದೀಪ ಉಗಲಾಟ
ಹಸಿರು ಅಭಿಯಾನದ ಪ್ರಮುಖ ಅಂಶಗಳು
- ಜುಲೈ 12ರಿಂದ 19ರವರೆಗೆ ಜಿಲ್ಲೆಯಾದ್ಯಂತ ವೃಕ್ಷಾರೋಪಣ
- ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿ ನೆಟ್ಟು ಪೋಷಿಸಲು ಕರೆ
- ಗದಗ ಜಿಲ್ಲಾ ಕ್ರೀಡಾಂಗಣ ಎದುರಿನ ಇಂದಿರಾ ರೋಟರಿ ಕ್ಲಬ್‌ನಲ್ಲಿ ‘ಒಬ್ಬರಿಗೊಂದು ಸಸಿ’ ಉಚಿತ ವಿತರಣೆ
- ನೆಟ್ಟ ಗಿಡಗಳ ಸಂರಕ್ಷಣೆಗೆ ರೋಟರಿಯಿಂದ ನಿರಂತರ ಮೇಲ್ವಿಚಾರಣೆ



