HomeKarnataka Newsನ್ಯಾಯಾಲಯಗಳು ಕೇವಲ ವ್ಯಾಜ್ಯ ಇತ್ಯರ್ಥದ ವೇದಿಕೆಗಳಲ್ಲ; ನೋವಿನಲ್ಲಿರುವವರಿಗೆ ನ್ಯಾಯ ಒದಗಿಸುವ ರಕ್ಷಕರು: ಹೈಕೋರ್ಟ್

ನ್ಯಾಯಾಲಯಗಳು ಕೇವಲ ವ್ಯಾಜ್ಯ ಇತ್ಯರ್ಥದ ವೇದಿಕೆಗಳಲ್ಲ; ನೋವಿನಲ್ಲಿರುವವರಿಗೆ ನ್ಯಾಯ ಒದಗಿಸುವ ರಕ್ಷಕರು: ಹೈಕೋರ್ಟ್

For Dai;y Updates Join Our whatsapp Group

ಬೆಂಗಳೂರು: ನ್ಯಾಯಾಲಯಗಳು ಕೇವಲ ವ್ಯಕ್ತಿಗಳು ಅಥವಾ ಸರ್ಕಾರಗಳ ನಡುವಿನ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ವೇದಿಕೆಗಳಷ್ಟೇ ಅಲ್ಲ, ಅಗತ್ಯವಿದ್ದಾಗ ಸಂಕಷ್ಟದಲ್ಲಿರುವವರಿಗೆ ನ್ಯಾಯ ಮತ್ತು ಸಮಾನತೆ ಒದಗಿಸುವ ರಕ್ಷಕರಾಗಿಯೂ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಮೂರು ವರ್ಷದ ಬಾಲಕ ನೀರಿನ ಸಂಪ್‌ಗೆ ಬಿದ್ದು ಮೃತಪಟ್ಟ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವಂತೆ ಮನೆಯ ಮಾಲೀಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ.

ಪ್ರಕರಣದಲ್ಲಿ ಉಭಯ ಪಕ್ಷಗಳು ಪರಸ್ಪರ ಒಪ್ಪಂದದ ಮೂಲಕ ವಿವಾದವನ್ನು ಇತ್ಯರ್ಥಪಡಿಸಿಕೊಳ್ಳಲು ಮುಂದಾಗಿರುವುದನ್ನು ಪರಿಗಣಿಸಿದ ನ್ಯಾಯಾಲಯ, ಕಳೆದುಹೋದ ಜೀವವನ್ನು ಯಾವುದೇ ರೀತಿಯಲ್ಲೂ ಮರಳಿ ತರಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಹಣಕಾಸಿನ ಪರಿಹಾರ ಜೀವಕ್ಕೆ ಪರ್ಯಾಯವಾಗುವುದಿಲ್ಲ. ಆದರೆ ಸಂತ್ರಸ್ತ ಕುಟುಂಬದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯಗಳು ಮಾನವೀಯ ದೃಷ್ಟಿಕೋನದಿಂದ ಪ್ರಗತಿಪರ ನಿರ್ಧಾರಗಳನ್ನು ಕೈಗೊಳ್ಳುವುದು ಅಗತ್ಯ ಎಂದು ತಿಳಿಸಿದೆ.

ಒಪ್ಪಂದದ ಭಾಗವಾಗಿ ಆರೋಪಿತ ಮನೆಯ ಮಾಲೀಕರು ಮೃತ ಬಾಲಕನ ಪೋಷಕರಿಗೆ ಮುಂದಿನ 12 ತಿಂಗಳವರೆಗೆ ಪ್ರತಿ ತಿಂಗಳು ₹10,000 ಪಾವತಿಸಲು ಒಪ್ಪಿಕೊಂಡಿದ್ದಾರೆ. ಇದರ ಜೊತೆಗೆ ₹5 ಲಕ್ಷ ಪರಿಹಾರ ಮೊತ್ತವನ್ನು ಪೋಷಕರ ಹೆಸರಿನಲ್ಲಿ ಖಾತೆ ತೆರೆಯುವ ಮೂಲಕ ಅಂಚೆ ಇಲಾಖೆಯ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಹೂಡಿಕೆಯಿಂದ ದೊರೆಯುವ ಮಾಸಿಕ ಬಡ್ಡಿಯನ್ನು ಐದು ವರ್ಷಗಳ ಕಾಲ ನೇರವಾಗಿ ಪೋಷಕರಿಗೆ ನೀಡಬೇಕು. ಆ ಹಣವನ್ನು ಮೃತ ಬಾಲಕನ ಸಹೋದರ ಹಾಗೂ ಸಹೋದರಿಯ ಶಿಕ್ಷಣ, ಪಾಲನೆ-ಪೋಷಣೆ ಮತ್ತು ಕಲ್ಯಾಣಕ್ಕಾಗಿ ಮಾತ್ರ ಬಳಸಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಮಗಳು ಪ್ರಾಪ್ತ ವಯಸ್ಸಿಗೆ ಬಂದ ಬಳಿಕ ಕಾನೂನುಬದ್ಧವಾಗಿ ಮೂಲ ಹೂಡಿಕೆ ಮೊತ್ತವನ್ನು ಹಿಂಪಡೆಯಲು ಅವಕಾಶವಿರುತ್ತದೆ ಎಂದೂ ತಿಳಿಸಿದೆ.

ದಿನಗೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಸಂತ್ರಸ್ತ ಕುಟುಂಬಕ್ಕೆ ಒಮ್ಮೆಗೆ ದೊಡ್ಡ ಮೊತ್ತದ ಹಣ ನೀಡಿದರೆ ಅದು ತಕ್ಷಣದ ಅಗತ್ಯಗಳಿಗೆ ಖರ್ಚಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಉಳಿದಿರುವ ಮಕ್ಕಳ ದೀರ್ಘಕಾಲೀನ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಮೊತ್ತವನ್ನು ಸಂರಕ್ಷಿಸುವುದು ಸೂಕ್ತ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ

2026ರ ಮೇ 27ರಂದು ರಾಜರಾಜೇಶ್ವರಿ ನಗರದ ಆರ್.ಆರ್. ಕೆಂಚೇನಹಳ್ಳಿಯ ಜನಪ್ರಿಯ ಲೇಔಟ್‌ನಲ್ಲಿರುವ ನಿರ್ಮಾಣ ಹಂತದ ತ್ರಿಲೋಕ ವಿಲ್ಲಾಸ್ ಅಪಾರ್ಟ್‌ಮೆಂಟ್ ಸಮೀಪ ಆಟವಾಡುತ್ತಿದ್ದ ಮೂರು ವರ್ಷದ ಬಾಲಕ ನೀರಿನ ಸಂಪ್‌ಗೆ ಬಿದ್ದು ಮೃತಪಟ್ಟಿದ್ದ. ಈ ಸಂಬಂಧ ನಿರ್ಮಾಣ ಸ್ಥಳದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಆರೋಪದಡಿ ಮನೆಯ ಮಾಲೀಕ ಅಭಿಷೇಕ್, ಮೇಸ್ತ್ರಿ ವೇಲು ಹಾಗೂ ಗುತ್ತಿಗೆದಾರ ಅಲೋಕ್ ಸುಂದರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 106(1) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಎಫ್‌ಐಆರ್ ರದ್ದುಪಡಿಸುವಂತೆ ಮನೆಯ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದು, ಸಂತ್ರಸ್ತ ಕುಟುಂಬ ಮತ್ತು ಆರೋಪಿತರ ನಡುವಿನ ಒಪ್ಪಂದವನ್ನು ಪರಿಗಣಿಸಿ ನ್ಯಾಯಾಲಯ ಪ್ರಕರಣ ಇತ್ಯರ್ಥಕ್ಕೆ ಒಪ್ಪಿಗೆ ನೀಡಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img