ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರು ಉಸಿರಾಟದ ತೊಂದರೆಯಿಂದ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ. ಚಿಕಿತ್ಸೆ ಫಲಕಾರಿಯಾಗಿ ನಡೆಯುತ್ತಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಮಣಿಪಾಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಸತ್ಯನಾರಾಯಣ ಮೈಸೂರು ಅವರು ಈ ಕುರಿತು ಮಾಹಿತಿ ನೀಡಿದ್ದು, ಚೆನ್ನಮ್ಮ ಅವರಿಗೆ ಸಣ್ಣ ಪ್ರಮಾಣದ ಉಸಿರಾಟದ ತೊಂದರೆ ಹಾಗೂ ಎದೆಯಲ್ಲಿ ಕಫ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಆಸ್ಪತ್ರೆಗೆ ದಾಖಲಾದ ವೇಳೆ ಆಮ್ಲಜನಕದ ಮಟ್ಟದಲ್ಲಿ ಸ್ವಲ್ಪ ಏರುಪೇರಾಗಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಯಾವುದೇ ಗಂಭೀರ ಪರಿಸ್ಥಿತಿ ಇಲ್ಲ ಎಂದು ಅವರು ಹೇಳಿದ್ದಾರೆ.
ಕಳೆದ ಒಂದು ವರ್ಷದಿಂದ ಚೆನ್ನಮ್ಮ ಅವರಿಗೆ ಆಗಾಗ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಸುಮಾರು 25 ದಿನಗಳ ಹಿಂದಷ್ಟೇ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಮನೆಗೆ ಮರಳಿದ್ದರು. ಆದರೆ ಮಂಗಳವಾರ ರಾತ್ರಿ ಮತ್ತೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾತ್ರಿ ಸುಮಾರು 8.30ಕ್ಕೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಸ್ತುತ ಅವರಿಗೆ ಆಂಟಿಬಯೋಟಿಕ್ ಔಷಧೋಪಚಾರ ನೀಡಲಾಗುತ್ತಿದ್ದು, ಚಿಕಿತ್ಸೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಆರೋಗ್ಯದಲ್ಲಿ ಮತ್ತಷ್ಟು ಸುಧಾರಣೆ ಕಂಡುಬಂದರೆ ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ವಿಷಯ ತಿಳಿದ ಕೂಡಲೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ರಾತ್ರಿ 10.30ರ ಸುಮಾರಿಗೆ ಆಸ್ಪತ್ರೆಗೆ ಭೇಟಿ ನೀಡಿ ಸುಮಾರು ಒಂದು ಗಂಟೆ ಕಾಲ ಪತ್ನಿಯ ಆರೋಗ್ಯ ವಿಚಾರಿಸಿದರು. ಬಳಿಕ ಪುತ್ರ ಎಚ್.ಡಿ. ರೇವಣ್ಣ, ಕುಟುಂಬದ ಸದಸ್ಯರು ಹಾಗೂ ವೈದ್ಯರೂ ಆಗಿರುವ ಅಳಿಯ ಡಾ. ಮಂಜುನಾಥ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದರು.
ಇದೇ ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಆರೋಗ್ಯದ ಮಾಹಿತಿ ಪಡೆಯುತ್ತಿದ್ದಾರೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ಮತ್ತು ಕುಟುಂಬಸ್ಥರು ಮನವಿ ಮಾಡಿದ್ದಾರೆ.



