ಫ್ರಾನ್ಸ್: ಯುರೋಪ್ ರಾಷ್ಟ್ರಗಳಲ್ಲಿ ಜೂನ್ ತಿಂಗಳಲ್ಲಿ ಕಾಣಿಸಿಕೊಂಡ ಭೀಕರ ಬಿಸಿಗಾಳಿಯಿಂದಾಗಿ ಭಾರಿ ಪ್ರಮಾಣದ ಸಾವು ಸಂಭವಿಸಿರುವ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಒಂಬತ್ತು ಯುರೋಪಿಯನ್ ದೇಶಗಳಲ್ಲಿ ಕನಿಷ್ಠ 12 ಸಾವಿರಕ್ಕೂ ಹೆಚ್ಚು ಮಂದಿ ಉಷ್ಣ ಅಲೆಗೆ ಬಲಿಯಾಗಿದ್ದಾರೆ ಎಂದು ರಾಷ್ಟ್ರೀಯ ಅಂಕಿ-ಅಂಶಗಳ ವಿಶ್ಲೇಷಣೆಯಿಂದ ತಿಳಿದುಬಂದಿದೆ.
ಈ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಎಎಫ್‌ಪಿ (AFP) ವಿಶ್ಲೇಷಣೆ ತಿಳಿಸಿದೆ. ಜೂನ್ ತಿಂಗಳಲ್ಲಿ ಯುರೋಪ್‌ನ ಹಲವು ಭಾಗಗಳಲ್ಲಿ ದಾಖಲೆ ಮಟ್ಟದ ತಾಪಮಾನ ಕಂಡುಬಂದಿದ್ದು, ಇಂಗ್ಲೆಂಡ್ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು.
ಜೂನ್ 22ರಿಂದ 28ರವರೆಗೆ ಬೆಲ್ಜಿಯಂ, ಫ್ರಾನ್ಸ್, ಜರ್ಮನಿ, ಲಕ್ಸೆಂಬರ್ಗ್, ನೆದರ್‌ಲ್ಯಾಂಡ್ಸ್, ಸ್ಪೇನ್ ಮತ್ತು ಸ್ವಿಟ್ಜರ್‌ಲ್ಯಾಂಡ್ ಸೇರಿದಂತೆ ಹಲವು ದೇಶಗಳಲ್ಲಿ ಶಾಖದ ಅಲೆಯ ಪರಿಣಾಮ ಹೆಚ್ಚುವರಿ ಸಾವುಗಳು ಸಂಭವಿಸಿವೆ. ಈ ಅವಧಿಯಲ್ಲೇ ಸುಮಾರು 10 ಸಾವಿರಕ್ಕೂ ಅಧಿಕ ಹೆಚ್ಚುವರಿ ಸಾವುಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ.
ಬ್ರಿಟನ್‌ನ ಹವಾಮಾನ ಕಚೇರಿ ನೀಡಿರುವ ಅಂದಾಜಿನ ಪ್ರಕಾರ, ಜೂನ್ 18ರಿಂದ 28ರವರೆಗೆ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಉಷ್ಣ ಅಲೆಯಿಂದಾಗಿ ಸುಮಾರು 2,200 ಮಂದಿ ಮೃತಪಟ್ಟಿದ್ದಾರೆ. ಯುರೋಪಿಯನ್ ಮರಣ ಮೇಲ್ವಿಚಾರಣಾ ವ್ಯವಸ್ಥೆ (ಯುರೋಮೊಮೊ)ದ ತಾತ್ಕಾಲಿಕ ವರದಿ ಪ್ರಕಾರ, ಜೂನ್ ಕೊನೆಯ ವಾರದಲ್ಲಿ ಹಲವು ದೇಶಗಳಲ್ಲಿ ಹೆಚ್ಚುವರಿ ಸಾವುಗಳು ಸಂಭವಿಸಿದ್ದು, ಒಟ್ಟು ಸಂಖ್ಯೆ 14,260ಕ್ಕೆ ತಲುಪಿದೆ ಎಂದು ತಿಳಿಸಲಾಗಿದೆ.
ಯುರೋಮೊಮೊ 24 ದೇಶಗಳ ಅಧಿಕೃತ ಅಂಕಿ-ಅಂಶಗಳನ್ನು ಆಧರಿಸಿ ಈ ಮಾಹಿತಿ ನೀಡಿದ್ದು, ಪೂರ್ವ ಯುರೋಪ್‌ನ ಕೆಲವು ಭಾಗಗಳ ಮಾಹಿತಿಗಳು ಇದರಲ್ಲಿ ಸೇರಿಲ್ಲ ಎಂದು ತಿಳಿಸಿದೆ.
ಯುರೋಪ್‌ನ ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಹ್ಯಾನ್ಸ್ ಹೆನ್ರಿ ಪಿ. ಕ್ಲುಗೆ, ಬೇಸಿಗೆ ಇನ್ನೂ ಮುಗಿದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಶಾಖದ ಅಲೆಯನ್ನು ಕೇವಲ ಹವಾಮಾನ ಘಟನೆ ಎಂದು ಪರಿಗಣಿಸದೆ ಆರೋಗ್ಯ ತುರ್ತು ಪರಿಸ್ಥಿತಿಯಾಗಿ ಸರ್ಕಾರಗಳು ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ.
“ಈ ಸಾವುಗಳಲ್ಲಿ ಹೆಚ್ಚಿನದನ್ನು ತಡೆಯಲು ಅಗತ್ಯವಾದ ಕ್ರಮಗಳು ಲಭ್ಯವಿವೆ. ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳು ಮತ್ತು ಸಾಕ್ಷ್ಯಾಧಾರಗಳು ಈಗಾಗಲೇ ಇವೆ” ಎಂದು ಕ್ಲುಗೆ ತಿಳಿಸಿದ್ದಾರೆ.
ಕಳೆದ ಏಳು ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿದ ಬೇಸಿಗೆಯ ವಾರಗಳಲ್ಲಿ ಜುಲೈ 2022 ಕೂಡ ಪ್ರಮುಖವಾಗಿತ್ತು. ಆ ಸಂದರ್ಭದಲ್ಲಿ ಕೋವಿಡ್ ಸೋಂಕು ಹಲವು ಯುರೋಪಿಯನ್ ರಾಷ್ಟ್ರಗಳಲ್ಲಿ ಇನ್ನೂ ಸಕ್ರಿಯವಾಗಿತ್ತು.
ಈ ಬಾರಿ ದಾಖಲಾಗಿರುವ ಹೆಚ್ಚುವರಿ ಸಾವುಗಳಿಗೆ ಬಿಸಿಗಾಳಿಯೇ ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬೇರೆ ಯಾವುದೇ ಪ್ರಮುಖ ಕಾರಣಗಳು ಕಂಡುಬಂದಿಲ್ಲ ಎಂದು ಡೆನ್ಮಾರ್ಕ್‌ನ ಸ್ಟೇಟನ್ಸ್ ಸೀರಮ್ ಇನ್‌ಸ್ಟಿಟ್ಯೂಟ್‌ನ ಸಾಂಕ್ರಾಮಿಕ ರೋಗ ತಜ್ಞ ಹಾಗೂ ಯುರೋಮೊಮೊ ಸಂಯೋಜಕ ಲಾಸ್ ವೆಸ್ಟರ್‌ಗಾರ್ಡ್ ತಿಳಿಸಿದ್ದಾರೆ.



