ಬಳ್ಳಾರಿ: ಪ್ರೀತಿಸಿ ವಿವಾಹವಾಗಿದ್ದ ಯುವಕನೊಬ್ಬ ಮದುವೆ ಸಂಭ್ರಮ ಮುಗಿದ ಕೆಲವೇ ಗಂಟೆಗಳಲ್ಲಿ ಹತ್ಯೆಯಾಗಿರುವ ಆಘಾತಕಾರಿ ಘಟನೆ ಬಳ್ಳಾರಿ ನಗರದ ಬಟ್ಟಿ ಏರಿಯಾದಲ್ಲಿ ನಡೆದಿದೆ. ನಬಿ ರಸೂಲ್ ಎಂಬ ನವವಿವಾಹಿತನ ಶವ ಮನೆ ಸಮೀಪವೇ ಪತ್ತೆಯಾಗಿದ್ದು, ಪ್ರೇಮ ವಿವಾಹದ ವೈಷಮ್ಯವೇ ಕೊಲೆಗೆ ಕಾರಣವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ವಿಚ್ಛೇದಿತ ಮಹಿಳೆಯೊಬ್ಬಳನ್ನು ಪ್ರೀತಿಸುತ್ತಿದ್ದ ರಸೂಲ್, ಕೆಲ ದಿನಗಳ ಹಿಂದೆ ಆಕೆಯನ್ನು ಕರೆದುಕೊಂಡು ಹೋಗಿದ್ದರು. ಬಳಿಕ ಎರಡೂ ಕುಟುಂಬಗಳ ನಡುವೆ ಮಾತುಕತೆ ನಡೆದು ಮದುವೆ ನೆರವೇರಿಸಲಾಗಿತ್ತು. ನಿನ್ನೆ ಮದುವೆ ಹಾಗೂ ಆರತಕ್ಷತೆ ಕಾರ್ಯಕ್ರಮ ಸಂತಸದಿಂದ ನಡೆದಿತ್ತು.
ರಾತ್ರಿ ಸ್ನೇಹಿತನ ಕರೆ ಬಂದಿದೆ ಎಂದು ಹೇಳಿ ಮನೆಯಿಂದ ಹೊರಟಿದ್ದ ರಸೂಲ್, ಮರಳಿ ಮನೆಗೆ ಬರಲಿಲ್ಲ. ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಮನೆಯಿಂದ ಸುಮಾರು 700 ಮೀಟರ್ ದೂರದಲ್ಲಿ ಅವರ ಮೃತದೇಹ ಪತ್ತೆಯಾಯಿತು.
ಮಹಿಳೆಯ ಕುಟುಂಬದವರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರೆಂಬ ಮಾಹಿತಿ ಲಭ್ಯವಾಗಿದ್ದು, ಈ ಹಿಂದೆ ಬೆದರಿಕೆಯೂ ನೀಡಲಾಗಿತ್ತು ಎನ್ನಲಾಗಿದೆ. ಈ ಎಲ್ಲಾ ಆಯಾಮಗಳನ್ನು ಪರಿಗಣಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.



