ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮುಂಗಾರು ಮಳೆಯ ಕೊರತೆಯಿಂದ ನರೇಗಲ್ಲ ಹೋಬಳಿಯಲ್ಲಿ ಉಂಟಾಗಿರುವ ಬೆಳೆ ಹಾನಿಯನ್ನು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಗುರುವಾರ ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಗದಗ ರಸ್ತೆಯಲ್ಲಿರುವ ವಿವಿಧ ರೈತರ ಜಮೀನುಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳಿಗೆ ರೈತ ಮುಖಂಡರು ಬೆಳೆ ಹಾನಿಯ ವಾಸ್ತವ ಸ್ಥಿತಿಯನ್ನು ತೋರಿಸಿದರು. ಮಳೆ ಕೊರತೆಯಿಂದ ಹೆಸರು, ಉದ್ದು, ಮೆಕ್ಕೆಜೋಳ, ತೊಗರಿ, ಉಳ್ಳಾಗಡ್ಡಿ, ಶೇಂಗಾ ಹಾಗೂ ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದ್ದು, ಕೆಲವೆಡೆ ಗೋವಿನಜೋಳದ ಬೆಳೆ ಸಂಪೂರ್ಣ ಒಣಗುತ್ತಿರುವ ದೃಶ್ಯವನ್ನು ಅಧಿಕಾರಿಗಳ ತಂಡ ಕಣ್ಣಾರೆ ವೀಕ್ಷಿಸಿತು.
ರೈತರೊಂದಿಗೆ ಮಾತುಕತೆ ನಡೆಸಿದ ಜಿಲ್ಲಾಧಿಕಾರಿಗಳು ಮಳೆಯ ಅಭಾವದಿಂದ ಎದುರಾಗಿರುವ ಸಂಕಷ್ಟಗಳ ಕುರಿತು ಮಾಹಿತಿ ಪಡೆದು, ಇಲ್ಲಿನ ಬೆಳೆ ಹಾನಿಯ ವಾಸ್ತವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಬೆಳೆ ವಿಮೆ ಕುರಿತು ಮಾತನಾಡಿದ ಅವರು, ಬ್ಯಾಂಕ್ಗಳಲ್ಲಿ ಬೆಳೆ ಸಾಲ ಪಡೆದಿರುವ ರೈತರಿಗೆ ಹೆಸರು ಮತ್ತು ಉದ್ದು ಬೆಳೆಗಳಿಗೆ ಮಾತ್ರ ಜುಲೈ 22ರವರೆಗೆ ಬೆಳೆ ವಿಮೆ ನೋಂದಣಿಗೆ ಅವಕಾಶ ವಿಸ್ತರಿಸಲಾಗಿದೆ ಎಂದು ತಿಳಿಸಿದರು. ಸಾಲ ನವೀಕರಣ ಸೇರಿದಂತೆ ತಾಂತ್ರಿಕ ಕಾರಣಗಳಿಂದ ವಿಮೆ ನೋಂದಣಿ ಮಾಡಿಸದ ರೈತರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಈ ವೇಳೆ ರೈತರು ಬ್ಯಾಂಕ್ಗಳಲ್ಲಿ ಸಾಲ ನವೀಕರಣ ವಿಳಂಬವಾಗುತ್ತಿರುವುದು ಹಾಗೂ 2025ರ ಮುಂಗಾರು ಹಂಗಾಮಿನ ಗೋವಿನಜೋಳ ಬೆಳೆ ವಿಮೆ ಪರಿಹಾರ ಇನ್ನೂ ಬಿಡುಗಡೆಯಾಗಿಲ್ಲ ಎಂದು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಹಾಗೂ ಬಾಕಿ ಇರುವ ವಿಮೆ ಪರಿಹಾರವನ್ನು ಶೀಘ್ರ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಮಳೆ ಅಭಾವದಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ತುರ್ತು ಪರಿಹಾರ ಕ್ರಮಗಳನ್ನು ಕೈಗೊಂಡು ಬೆಳೆ ವಿಮೆ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ರೈತರು ಆಗ್ರಹಿಸಿದರು. ರೈತರ ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮದ ಭರವಸೆ ನೀಡಿದರು.
ಕುತೂಹಲಕಾರಿ ಸಂಗತಿಯೆಂದರೆ, ಅಧಿಕಾರಿಗಳ ತಂಡ ಬೆಳೆ ಹಾನಿ ಪರಿಶೀಲನೆ ನಡೆಸುತ್ತಿದ್ದ ವೇಳೆಯೇ ಮಳೆ ಸುರಿಯತೊಡಗಿದ್ದು, ಪರಿಶೀಲನಾ ಕಾರ್ಯ ಕೆಲಕಾಲ ಸ್ಥಗಿತಗೊಳ್ಳುವಂತಾಯಿತು.
ಪರಿಶೀಲನೆ ವೇಳೆ ಉಪ ವಿಭಾಗಾಧಿಕಾರಿಗಳು, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ರೋಣ ಉಪ ಕೃಷಿ ನಿರ್ದೇಶಕರು, ರೋಣ ಸಹಾಯಕ ಕೃಷಿ ನಿರ್ದೇಶಕರು, ನರೇಗಲ್ಲ ಕೃಷಿ ಅಧಿಕಾರಿಗಳು, ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಅಶೋಕ ಬೇವಿನಕಟ್ಟಿ, ಚಂದ್ರು ಹೊನವಾಡ, ಶರಣಪ್ಪ ಧರ್ಮಾಯತ್, ಯಲ್ಲಪ್ಪ ಮಣ್ಣವಡ್ಡರ, ಬಸನಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಶರಣಪ್ಪ ಶೀಕಣಿ, ಆನಂದ ಕೊಟಗಿ, ಸಂಗಯ್ಯ ಶಾಂತಯ್ಯನಮಠ, ಶಶಿಧರ ಸಂಕನಗೌಡರ, ನಿಂಗನಗೌಡ ಲಕ್ಕನಗೌಡ್ರ, ಮಹೇಶ ಶಿವಶಿಂಪ್ರ, ನಿಂಗಪ್ಪ ಕಣವಿ ಹಾಗೂ ಬಸನಗೌಡ ಪೊಲೀಸ್ ಪಾಟೀಲ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.



