ಗದಗ: ಎಸ್ಐಆರ್ ಕಾರ್ಯನಿರ್ವಹಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಾಗೆವಾಡಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಬಾಗೆವಾಡಿ ಗ್ರಾಮದ ರತ್ನಮ್ಮ ಬಳಿಗಾರ (43) ಎಂದು ಗುರುತಿಸಲಾಗಿದೆ. ರತ್ನಮ್ಮ ಅವರು ಎಸ್ಐಆರ್ ಹಿನ್ನೆಲೆ ಬಿಎಲ್ಒ (BLO) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಶುಕ್ರವಾರ ಸಂಜೆ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರು ಬಾಗೆವಾಡಿ ಗ್ರಾಮಕ್ಕೆ ಭೇಟಿ ನೀಡಿ ಎಸ್ಐಆರ್ ಕಾರ್ಯದ ಪ್ರಗತಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಗ್ರಾಮದ ಮಹೇಶಗೌಡ ಪಾಟೀಲ ಅವರ ಮನೆಯಲ್ಲಿ ಶಾಸಕರು ಹಾಗೂ ಸಿಬ್ಬಂದಿಗೆ ಚಹಾ ವ್ಯವಸ್ಥೆ ಮಾಡಲಾಗಿತ್ತು.
ಸಭೆ ಮುಗಿದ ಬಳಿಕ ಚಹಾ ಕುಡಿಯುತ್ತಿದ್ದ ವೇಳೆ ರತ್ನಮ್ಮ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರೂ, ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ.
ತೀವ್ರ ಹೃದಯಾಘಾತದಿಂದ ರತ್ನಮ್ಮ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂಡರಗಿ ತಹಶೀಲ್ದಾರ್ ರ್ರಿಸ್ವಾಮಿ ಅವರು ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.



