ಗದಗ: ಕರ್ತವ್ಯ ನಿಷ್ಠೆ, ಶಿಸ್ತು ಹಾಗೂ ಸೇವಾ ಮನೋಭಾವದಿಂದ ಗೃಹರಕ್ಷಕರು ಸಮಾಜದ ವಿಶ್ವಾಸ ಗಳಿಸಬೇಕು. ಪ್ರಾಮಾಣಿಕ ಸೇವೆಯೇ ಗೃಹರಕ್ಷಕ ದಳದ ನಿಜವಾದ ಶಕ್ತಿಯಾಗಿದೆ ಎಂದು ಸಮಾಜಸೇವಕ ಅಪ್ಪಣ್ಣ ಎ. ಇನಾಮತಿ ಹೇಳಿದರು.
ಗದಗ ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಗೃಹರಕ್ಷಕ ದಳ ಘಟಕದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಿಬ್ಬಂದಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಗೃಹರಕ್ಷಕ ದಳದ ಸಿಬ್ಬಂದಿ ಪೊಲೀಸ್ ಇಲಾಖೆಗೆ ಪೂರಕವಾಗಿ ಸಾರ್ವಜನಿಕ ಸೇವೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಸಾಧನೆ ಮಾಡಿದ ಸಿಬ್ಬಂದಿಯನ್ನು ಗೌರವಿಸುವುದು ಇತರರಿಗೂ ಪ್ರೇರಣೆಯಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಮಾದೇಷ್ಟ ಹಾಗೂ ನ್ಯಾಯವಾದಿ ಸಿ.ಬಿ. ಗೂಳರೆಡ್ಡಿ ಮಾತನಾಡಿ, ಕುರ್ತಕೋಟಿ ಗ್ರಾಮದಲ್ಲಿ ಗೃಹರಕ್ಷಕ ದಳದ ಚಟುವಟಿಕೆಗಳಿಗೆ ಎಪಿಎಂಸಿ ಮಾಜಿ ಸದಸ್ಯ ದಿ. ರವಿ ಇನಾಮತಿ ಅವರು ನೀಡಿರುವ ಪ್ರೋತ್ಸಾಹ ಮತ್ತು ಸಹಕಾರ ಅಪಾರವಾಗಿದೆ. ಅವರ ಸೇವೆ ಮತ್ತು ಬೆಂಬಲವನ್ನು ಸದಾ ಸ್ಮರಿಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತ ಹಾಗೂ ಜಿಲ್ಲಾ ಬೋಧಕರಾದ ಕಿರಣ್ ಕುಮಾರ್ ಕಟಗಿ, ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಗದಗ ಜಿಲ್ಲೆಯನ್ನು ಪ್ರತಿನಿಧಿಸಿ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಟಿ.ಎಲ್. ರಾಜಕುಮಾರ್, ಕಚೇರಿ ಸಿಬ್ಬಂದಿ ಆರ್.ಎಂ. ಹುಡೆದ ಹಾಗೂ ಕುರ್ತಕೋಟಿ ಘಟಕದ ಪ್ರಭಾರ ಘಟಕಾಧಿಕಾರಿ ವಿಜಯಕುಮಾರ್ ಕರ್ಚಿಗಿ ಅವರನ್ನು ಕುರ್ತಕೋಟಿ ಗೃಹರಕ್ಷಕ ದಳ ಘಟಕದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳದ ಅಧಿಕಾರಿಗಳು, ಸಿಬ್ಬಂದಿ ಬಸವರಾಜ ಹರ್ತಿ ಹಾಗೂ ಗಣ್ಯರು ಉಪಸ್ಥಿತರಿದ್ದರು.



