HomeGadag Newsಶಾಲೆಗಳಿಂದ ಕಣ್ಮರೆಯಾಗುತ್ತಿವೆ ನೀತಿ ಪಾಠಗಳು!

ಶಾಲೆಗಳಿಂದ ಕಣ್ಮರೆಯಾಗುತ್ತಿವೆ ನೀತಿ ಪಾಠಗಳು!

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಶಾಲಾ ಪಠ್ಯಕ್ರಮದಿಂದ ನೀತಿ ಪಾಠಗಳು ಹಾಗೂ ನೀತಿ ಕಥೆಗಳು ಕಣ್ಮರೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಕ್ಕಳಲ್ಲಿ ಕಥೆಗಳನ್ನು ಕೇಳುವ ಆಸಕ್ತಿ ಇಂದಿಗೂ ಜೀವಂತವಾಗಿದ್ದರೂ, ಹೇಳುವವರೇ ಇಲ್ಲದಂತಾಗಿದೆ. ಈ ಕೊರತೆಯಿಂದ ಮಕ್ಕಳು ಮೊಬೈಲ್ ಮತ್ತು ದೂರದರ್ಶನದ ಗೀಳಿಗೆ ಸಿಲುಕಿ ಮೌಲ್ಯಾಧಾರಿತ ಬದುಕಿನಿಂದ ದೂರವಾಗುತ್ತಿದ್ದಾರೆ ಎಂದು ಕಾಶಿ ಜಂಗಮವಾಡಿಮಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಕಳವಳ ವ್ಯಕ್ತಪಡಿಸಿದರು.

ನಗರದ ಮಾಂಗಲ್ಯ ಮಂದಿರದಲ್ಲಿ ಗದಗ-ಬೆಟಗೇರಿ ಪಂಚಾಚಾರ್ಯ ಸೇವಾ ಸಂಘದ ಆಶ್ರಯದಲ್ಲಿ ಆಷಾಢ ಮಾಸದ ಅಂಗವಾಗಿ ಆಯೋಜಿಸಿರುವ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಮಾಲಿಕೆಯಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ಹಿಂದೆ ಅಜ್ಜ-ಅಜ್ಜಿಯರು ಚಂದಮಾಮ, ವಿಕ್ರಮ-ಬೇತಾಳದಂತಹ ಕಥೆಗಳ ಮೂಲಕ ಮಕ್ಕಳಿಗೆ ನೀತಿ ಬೋಧಿಸುತ್ತಿದ್ದರು. ಆದರೆ ಇಂದು ತಂದೆ-ತಾಯಿಯರು ಉದ್ಯೋಗದಲ್ಲಿ ನಿರತರಾಗಿದ್ದು, ಶಾಲೆಗಳಲ್ಲೂ ನೀತಿ ಕಥೆಗಳಿಗೆ ಸ್ಥಾನ ಕಡಿಮೆಯಾಗಿದೆ. ಪರಿಣಾಮ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ದೊರೆಯುತ್ತಿಲ್ಲ. ಪಾಲಕರು ಮಕ್ಕಳೊಂದಿಗೆ ಸಮಯ ಕಳೆಯಬೇಕು, ಅವರ ಭಾವನೆಗಳನ್ನು ಅರಿತುಕೊಳ್ಳಬೇಕು. ಇಲ್ಲವಾದರೆ ಅದರ ದುಷ್ಪರಿಣಾಮವನ್ನು ಮುಂದಿನ ದಿನಗಳಲ್ಲಿ ಸಮಾಜವೇ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶ್ರೀ ಸಿದ್ಧಾಂತ ಶಿಖಾಮಣಿ ಸಾಮಾನ್ಯ ಗ್ರಂಥವಲ್ಲ. ಜಗದ್ಗುರು ರೇಣುಕ ಭಗವತ್ಪಾದರು ಅಗಸ್ತ್ಯ ಮಹರ್ಷಿಗಳ ಮೂಲಕ ಸಮಸ್ತ ಮನುಕುಲದ ಶ್ರೇಯೋಭಿವೃದ್ಧಿಗಾಗಿ ನೀಡಿದ ದಿವ್ಯೋಪದೇಶವಾಗಿದೆ. ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆ ಉಪದೇಶಿಸಿದಂತೆ, ರೇಣುಕ ಭಗವತ್ಪಾದರು ನೀಡಿದ ಈ ಗ್ರಂಥವನ್ನು ‘ರೇಣುಕ ಗೀತೆ’ ಎಂದೂ ಕರೆಯಲಾಗುತ್ತದೆ ಎಂದು ಹೇಳಿದರು.

ನರೇಗಲ್ಲ ಮಠದ ಸ್ವಾಮೀಜಿಗಳ ಸೇವೆಯನ್ನು ಶ್ಲಾಘಿಸಿದ ಅವರು, ಅವರ ಪ್ರವಚನ ಸೇವೆ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರಕ್ಕೂ ವಿಸ್ತರಿಸಿದ್ದು, ಶುದ್ಧ ಕನ್ನಡದ ಮೂಲಕ ಸಿದ್ಧಾಂತ ಶಿಖಾಮಣಿಯ ಸಂದೇಶವನ್ನು ಜನರಿಗೆ ತಲುಪಿಸುತ್ತಿರುವುದು ಶ್ಲಾಘನೀಯ ಎಂದರು.

ಗೋಸಂರಕ್ಷಣೆ, ಭಾರತೀಯ ಸಂಸ್ಕೃತಿ ಹಾಗೂ ಕುಟುಂಬ ಮೌಲ್ಯಗಳ ಉಳಿವಿಗೆ ಪ್ರತಿಯೊಬ್ಬರೂ ಬದ್ಧರಾಗಬೇಕು. ಸಾಕು ಪ್ರಾಣಿಗಳನ್ನು ಪ್ರೀತಿಯಿಂದ ಸಾಕಬೇಕು, ಆದರೆ ನಮ್ಮ ಸಂಸ್ಕೃತಿಯ ಮೂಲ ಮೌಲ್ಯಗಳನ್ನು ಮರೆಯಬಾರದು ಎಂದು ಜಗದ್ಗುರುಗಳು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಗಣ್ಯರು, ಪಂಚಾಚಾರ್ಯ ವೇದ ಆಗಮ ಸಂಸ್ಕೃತ ಪಾಠಶಾಲೆಯ ವಟುಗಳು, ಸಂಗೀತ ಕಲಾ ಬಳಗದ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

“ಮಕ್ಕಳಲ್ಲಿ ನೀತಿ ಕಥೆಗಳನ್ನು ಕೇಳುವ ಹಂಬಲ ಇಂದಿಗೂ ಇದೆ. ಆದರೆ ಹೇಳುವವರೇ ಇಲ್ಲದಂತಾಗಿದೆ. ಪಾಲಕರು ಮಕ್ಕಳೊಂದಿಗೆ ಸಮಯ ಕಳೆಯದಿದ್ದರೆ, ಮೊಬೈಲ್‌ವೇ ಅವರ ಗುರುವಾಗುವ ಅಪಾಯವಿದೆ.”

– ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು

ಜು.16ರಿಂದ ನಡೆಯುತ್ತಿರುವ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಮಾಲಿಕೆಗೆ ಜು.21ರಂದು ಸಂಜೆ 7 ಗಂಟೆಗೆ ಮಾಂಗಲ್ಯ ಮಂದಿರದಲ್ಲಿ ಮಂಗಲೋತ್ಸವ ನಡೆಯಲಿದೆ. ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಡಾ. ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಕಾಶಿ ಪೀಠದ ನೂತನ ಜಗದ್ಗುರುಗಳು ಸಾನಿಧ್ಯ ವಹಿಸಲಿದ್ದು, ವಿವಿಧ ಮಠಾಧೀಶರು, ಗಣ್ಯರು ಹಾಗೂ ಭಕ್ತರು ಭಾಗವಹಿಸಲಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img