ಬೆಂಗಳೂರು: ಪದ್ಮ ಪ್ರಶಸ್ತಿ ಹಾಗೂ ಜ್ಞಾನಪೀಠ ಪ್ರಶಸ್ತಿ ನೀಡುವಂತೆ ತಮ್ಮ ಪರವಾಗಿ ಆರಂಭವಾಗಿದ್ದ ಅಭಿಯಾನವನ್ನು ಕನ್ನಡದ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ತಿರಸ್ಕರಿಸಿದ್ದಾರೆ. ಪ್ರಶಸ್ತಿಗಿಂತ ಕನ್ನಡದ ಹಕ್ಕು ಮತ್ತು ಭಾಷೆಯ ಅಸ್ತಿತ್ವಕ್ಕಾಗಿ ನಡೆಯುವ ಹೋರಾಟಗಳೇ ಮುಖ್ಯ ಎಂದು ಹೇಳುವ ಮೂಲಕ ಅಭಿಯಾನವನ್ನು ಕೂಡಲೇ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ.
ನಟ ನೆನಪಿರಲಿ ಪ್ರೇಮ್ ಆರಂಭಿಸಿದ್ದ ಅಭಿಯಾನಕ್ಕೆ ಪ್ರತಿಕ್ರಿಯಿಸಿದ ಹಂಸಲೇಖ, “ಇದಕ್ಕೆ ನನ್ನ ಒಪ್ಪಿಗೆ ಇಲ್ಲ. ಇದು ಅಭಿಮಾನದ ದುಡುಕು, ಪ್ರೀತಿಯ ತೊಂದರೆ. ಸೀನ್, ಟ್ಯೂನ್, ಲಿರಿಕ್ಸ್ ಯಾವುದಕ್ಕೂ ಹೊಂದದ ಫ್ಲಾಪ್ ಸಾಂಗಿದು. ದಯವಿಟ್ಟು ಇದನ್ನು ನಿಲ್ಲಿಸಿ” ಎಂದು ನೇರವಾಗಿ ತಿಳಿಸಿದ್ದಾರೆ.
ಪ್ರಶಸ್ತಿಗಳಿಗಾಗಿ ಪ್ರಚಾರ ನಡೆಸುವುದಕ್ಕಿಂತ ಕನ್ನಡ ಭಾಷೆಯ ಹಕ್ಕು, ಗೌರವ ಮತ್ತು ಉಳಿವಿಗಾಗಿ ಜನರನ್ನು ಒಗ್ಗೂಡಿಸುವ ಅಭಿಯಾನಗಳು ಅಗತ್ಯವೆಂದು ಅವರು ಒತ್ತಿ ಹೇಳಿದ್ದಾರೆ.
ಸುಮಾರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ಸಂಗೀತ ಮತ್ತು ಸಾಹಿತ್ಯದ ಮೂಲಕ ಅಳಿಸಲಾಗದ ಛಾಪು ಮೂಡಿಸಿರುವ ಹಂಸಲೇಖ ಸಾವಿರಾರು ಜನಪ್ರಿಯ ಹಾಡುಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಕನ್ನಡದ ಜೊತೆಗೆ ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗಕ್ಕೂ ಸಂಗೀತ ನೀಡಿದ್ದರೂ, ಅವರಿಗೆ ಇನ್ನೂ ಯಾವುದೇ ಕೇಂದ್ರ ನಾಗರಿಕ ಪ್ರಶಸ್ತಿ ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ಆರಂಭವಾಗಿದ್ದ ಅಭಿಯಾನಕ್ಕೆ ಇದೀಗ ಸ್ವತಃ ಹಂಸಲೇಖ ಅವರೇ ತೆರೆ ಎಳೆದಿದ್ದಾರೆ.



