ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಶಾಲಾಪೂರ್ವ ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎಚ್ಡಿಎಫ್ಸಿ ಲೈಫ್ (ಮುಂಬೈ) ಹಾಗೂ ಕಲಿಕೆ–ಟಾಟಾ ಟ್ರಸ್ಟ್ಸ್ (ಬೆಂಗಳೂರು) ಸಹಯೋಗದಲ್ಲಿ ನಾಲ್ಕು ವರ್ಷಗಳ ಅವಧಿಯ ಮಹತ್ವದ ಒಡಂಬಡಿಕೆಗೆ ಸಹಿ ಹಾಕಲಾಗಿದೆ.
2026-27ನೇ ಸಾಲಿನಿಂದ ಜಿಲ್ಲೆಯ ಐದು ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯ 1,248 ಅಂಗನವಾಡಿ ಕೇಂದ್ರಗಳಲ್ಲಿ ಶಾಲಾಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧಾ ಜಿ. ಮಣ್ಣೂರ, ಶಾಲಾಪೂರ್ವ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ ಹೆಜ್ಜೆಯಾಗಿದ್ದು, ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಶಿವಕುಮಾರ ಡಿ. ಅವರು ಕಾರ್ಯಕ್ರಮದ ರೂಪರೇಷೆ ಕುರಿತು ವಿವರಿಸಿದರೆ, ಎಚ್ಡಿಎಫ್ಸಿ ಲೈಫ್ನ ಎಸ್ವಿಪಿ (ಮಾರ್ಕೆಟಿಂಗ್–ಸಿಎಸ್ಆರ್) ರೀನಾ ಭಾತಿರ್ ಯೋಜನೆಗೆ ಅಗತ್ಯವಿರುವ ಅನುದಾನ ಹಾಗೂ ಅನುಷ್ಠಾನದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎನ್. ಶ್ರೀಧರ್, ರೀಜಿನಲ್ ಹೆಡ್ ಸೂರಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ಕಲಿಕೆ–ಟಾಟಾ ಟ್ರಸ್ಟ್ಸ್ನ ಇಸಿಸಿಇ ಕಾರ್ಯಕ್ರಮ ಅಧಿಕಾರಿ ಕೊಟ್ರೇಶ್ ಎ.ವೈ., ಜಿಲ್ಲಾ ವ್ಯವಸ್ಥಾಪಕ ಅಶೋಕ, ಜಿಲ್ಲೆಯ ಎಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕಿಯರು ಹಾಗೂ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನೇತ್ರಾ ನಿರೂಪಿಸಿ, ವಂದಿಸಿದರು.



