ವಿಜಯಸಾಕ್ಷಿ ಸುದ್ದಿ, ಗದಗ: ಶಿರಡಿ ಸಾಯಿಬಾಬಾ ಯಾವುದೇ ಒಂದು ಧರ್ಮದ ಪ್ರಚಾರಕರಲ್ಲ. ಅವರು ಮಾನವ ಧರ್ಮದ ಮಹಾಗುರು. ‘ಸಬ್ ಕಾ ಮಾಲಿಕ್ ಏಕ್’ ಎಂಬ ಸಂದೇಶದ ಮೂಲಕ ವಿಶ್ವಮಾನವೀಯತೆ, ಪ್ರೀತಿ, ದಯೆ, ಕರುಣೆ ಹಾಗೂ ಸಮಾನತೆಯ ಬದುಕನ್ನು ಬೋಧಿಸಿದ ಮಹಾನ್ ಸಂತರು ಎಂದು ಗದಗದ ಹಿರಿಯ ಚಿಂತಕ ಹಾಗೂ ವೈದ್ಯ ಡಾ. ಸಂಗಮನಾಥ ಬಿ. ಶೆಟ್ಟರ ಹೇಳಿದರು.
ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗದಗ-ಬೆಟಗೇರಿ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗ ವತಿಯಿಂದ ಗುರುಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಆಧ್ಯಾತ್ಮಿಕ ಪ್ರವಚನ ಮಾಲಿಕೆಯಲ್ಲಿ ಅವರು ಮಾತನಾಡಿದರು.
ಭಕ್ತಿ ಎಂದರೆ ಕೇವಲ ಪೂಜೆ-ಪುನಸ್ಕಾರ ಅಥವಾ ವಿಧಿವಿಧಾನಗಳಲ್ಲ. ಅದು ಹೃದಯದ ನಿರ್ಮಲ ಭಾವ, ಅಚಲ ನಂಬಿಕೆ ಮತ್ತು ಸಂಪೂರ್ಣ ಸಮರ್ಪಣೆಯಾಗಿದೆ. ಸಾಯಿಬಾಬಾ ಜಾತಿ, ಮತ, ಪಂಥಗಳ ಭೇದವಿಲ್ಲದೆ ಭಕ್ತನ ಶ್ರದ್ಧೆ ಮತ್ತು ಸಬೂರಿಯನ್ನೇ ಸ್ವೀಕರಿಸುತ್ತಾರೆ ಎಂದು ಹೇಳಿದರು.
ಸಾಯಿಬಾಬಾ ತಮ್ಮ ಬದುಕಿನಲ್ಲಿ ಮೂರ್ತಿ ಅಥವಾ ಫೋಟೋ ಪೂಜೆಯನ್ನು ಪ್ರೋತ್ಸಾಹಿಸಲಿಲ್ಲ. ಭಕ್ತನ ನಿಷ್ಕಪಟ ನಂಬಿಕೆಯೇ ದೈವಾನುಭವಕ್ಕೆ ಕಾರಣವಾಗುತ್ತದೆ ಎಂಬುದನ್ನು ಹಲವು ಪ್ರಸಂಗಗಳ ಮೂಲಕ ಬೋಧಿಸಿದ್ದರು ಎಂದು ಡಾ. ಶೆಟ್ಟರ ವಿವರಿಸಿದರು.
ಅಲಿ ಅಹಮದ್ ಅವರು ಮುದ್ರಿಸಿದ್ದ ಸಾಯಿಬಾಬಾರ ಭಾವಚಿತ್ರಗಳು, ಮೌಲಾನಾ ಇಸು ಮುಜಾವರ್ ಅವರಿಗೆ ದೊರೆತ ದಿವ್ಯಾನುಭವ ಹಾಗೂ ಸಾಹೇಬ್ ಎಂಬ ಭಕ್ತನಿಗೆ ಬಾಬಾ ನೀಡಿದ ಆಧ್ಯಾತ್ಮಿಕ ಮಾರ್ಗದರ್ಶನದ ಪ್ರಸಂಗಗಳನ್ನು ಅವರು ವಿವರಿಸಿದರು.
1918ರ ವಿಜಯದಶಮಿಯಂದು ಮಹಾಸಮಾಧಿ ಹೊಂದಿದ ಸಾಯಿಬಾಬಾ, ಅದಕ್ಕೂ ಎರಡು ವರ್ಷಗಳ ಮುನ್ನವೇ ತಮ್ಮ ದೇಹತ್ಯಾಗದ ಕುರಿತು ಸಂಕೇತ ನೀಡಿದ್ದರು. ದೇಹವೆಂಬ ವಸ್ತ್ರ ತಾತ್ಕಾಲಿಕವಾಗಿದ್ದು, ಆತ್ಮಕ್ಕೆ ಜಾತಿ-ಮತ-ಧರ್ಮಗಳ ಮಿತಿ ಇಲ್ಲ ಎಂಬ ಮಹೋನ್ನತ ಸಂದೇಶವನ್ನು ತಮ್ಮ ಜೀವನದ ಮೂಲಕವೇ ಸಾರಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಸಾದ ಸೇವೆಯ ಜವಾಬ್ದಾರಿ ವಹಿಸಿಕೊಂಡಿದ್ದ ಚೈತ್ರಾ ಶೆಟ್ಟರ, ಜಿ.ವಿ. ಪಾಟೀಲ, ಎಸ್.ಎ. ಯಲಬುರ್ಗಿ, ವೀರಯ್ಯ ಹಿರೇಮಠ, ಶಿಲ್ಪಾ ಬೆಂಗಳೂರು, ಲಲಿತಾ ಜಗದಾಳ, ಅಶೋಕ ಕರವೀರಶೆಟ್ಟರ, ಲಕ್ಷ್ಮೀ ಮಲಹೋಳಿ, ಅನಿತಾ ತೋಟಗಂಟಿಮಠ, ಸ್ನೇಹಾ ಹಿರೇಮಠ ಹಾಗೂ ಅದ್ವೈತ ಯರಗೇರಿ ಕುಟುಂಬವನ್ನು ಸನ್ಮಾನಿಸಲಾಯಿತು.
ಮಹೇಶಗೌಡ ತಲೆಗೌಡ್ರ ಸ್ವಾಗತಿಸಿದರು. ಸದಾಶಿವಪ್ಪ ವಾಲಿ ವಂದಿಸಿದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
“ಸಾಯಿಬಾಬಾ ಯಾವುದೇ ಧರ್ಮದ ಪ್ರಚಾರಕರಲ್ಲ; ‘ಸಬ್ ಕಾ ಮಾಲಿಕ್ ಏಕ್’ ಎಂಬ ಸಂದೇಶದ ಮೂಲಕ ವಿಶ್ವಮಾನವೀಯತೆ, ಪ್ರೀತಿ ಮತ್ತು ಸಮಾನತೆಯ ಬದುಕನ್ನು ಬೋಧಿಸಿದ ಮಹಾನ್ ಸಂತರು.”
– ಡಾ. ಸಂಗಮನಾಥ ಬಿ. ಶೆಟ್ಟರ, ಹಿರಿಯ ಚಿಂತಕ ಮತ್ತು ವೈದ್ಯ



