ಹಾಸನ: ಇತ್ತೀಚೆಗೆ ನಿಧನರಾದ ಶ್ರೀಮತಿ ಚನ್ನಮ್ಮ ಅವರ ಉತ್ತರ ಕ್ರಿಯೆಯ ವಿಧಿ ವಿಧಾನಗಳು ಗುರುವಾರ ಹರದನಹಳ್ಳಿಯ ಮಾವಿನಕೆರೆ ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಅವರ ಸಮಾಧಿ ಸ್ಥಳದಲ್ಲಿ ನಡೆಯಲಿವೆ.
ಉತ್ತರ ಕ್ರಿಯೆಯ ಹಿಂದಿನ ದಿನವಾದ ಬುಧವಾರ, ಸಮಾಧಿ ಸ್ಥಳದಲ್ಲಿ ನಡೆಯುತ್ತಿರುವ ಸಿದ್ಧತೆಗಳನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಸಹೋದರ ಹಾಗೂ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರೊಂದಿಗೆ ಪರಿಶೀಲಿಸಿದರು.
ಗಣ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸುವ ಹಿನ್ನೆಲೆಯಲ್ಲಿ ಐದು ಹೆಲಿಪ್ಯಾಡ್‌ಗಳನ್ನು ಸಿದ್ಧವಾಗಿಡಲಾಗಿದೆ. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದ್ದು, ಈ ಹಿನ್ನೆಲೆಯಲ್ಲಿ ವ್ಯಾಪಕ ವ್ಯವಸ್ಥೆ ಮಾಡಲಾಗಿದೆ. ಸುಮಾರು ಆರು ಲಕ್ಷಕ್ಕೂ ಹೆಚ್ಚು ಆಹ್ವಾನ ಪತ್ರಿಕೆಗಳನ್ನು ಮನೆಮನೆಗೂ ತಲುಪಿಸಲಾಗಿದೆ ಎಂದು ತಿಳಿಸಲಾಗಿದೆ.
ಚನ್ನಮ್ಮ ಅವರ ಸಮಾಧಿ ದರ್ಶನ ಹಾಗೂ ಪ್ರಸಾದ ಸ್ವೀಕಾರಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಒಂದು ಪಂಕ್ತಿಯಲ್ಲಿ 22 ಸಾವಿರ ಜನರು ಕುಳಿತು ಪ್ರಸಾದ ಸ್ವೀಕರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
ಮಳೆಯ ಸಾಧ್ಯತೆ ಹಿನ್ನೆಲೆಯಲ್ಲಿ 15 ಬೃಹತ್ ಜರ್ಮನ್ ಟೆಂಟ್‌ಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ ಮೂರು ವಿಭಾಗಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಗಣ್ಯರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಚನ್ನಮ್ಮ ಅವರ ಸಮಾಧಿ ದರ್ಶನಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಯಾವುದೇ ಭೇದಭಾವವಿಲ್ಲದೆ ಒಂದೇ ರೀತಿಯ ಪ್ರಸಾದ ವಿತರಿಸಲಾಗುತ್ತದೆ. ಪ್ರಸಾದದಲ್ಲಿ 20ಕ್ಕೂ ಹೆಚ್ಚು ಪದಾರ್ಥಗಳು ಇರಲಿದ್ದು, ಚನ್ನಮ್ಮ ಅವರಿಗೆ ಇಷ್ಟವಾದ ಆಹಾರ ಪದಾರ್ಥಗಳನ್ನೂ ಸೇರಿಸಲಾಗಿದೆ.
20ಕ್ಕೂ ಹೆಚ್ಚು ಬಗೆಯ ಪ್ರಸಾದ:
ಪ್ರಸಾದದಲ್ಲಿ ಅಕ್ಕಿ ಪಾಯಸ, ಬೂಂದಿ, ಕಾಯಿ ಹೋಳಿಗೆ, ಕಜ್ಜಾಯ, ಬಾದಾಮಿ ಹಲ್ವಾ, ಇಡ್ಲಿ-ಸಾಂಬಾರ್, ದೋಸೆ, ಪುಳಿಯೋಗರೆ, ಬಿಸಿಬೇಳೆ ಬಾತ್, ಮಸಾಲೆ ವಡೆ, ಉದ್ದಿನ ವಡೆ, ಕೋಸಂಬರಿ, ತರಕಾರಿ ಕೂಟು, ಅನ್ನ, ಮಜ್ಜಿಗೆ ಹುಳಿ ಸೇರಿದಂತೆ ಹಲವು ಬಗೆಯ ಖಾದ್ಯಗಳು ಇರಲಿವೆ.
ಪ್ರಸಾದ ತಯಾರಿಕಾ ಕಾರ್ಯದಲ್ಲಿ ಐದು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ. ಶಾಸ್ತ್ರೋಕ್ತವಾಗಿ ಪ್ರಸಾದ ತಯಾರಿಸಲಾಗುತ್ತಿದ್ದು, ಹಲವು ತಂಡಗಳನ್ನು ರಚಿಸಲಾಗಿದೆ.
ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, “ನಮ್ಮ ತಾಯಿ ಅನ್ನಪೂರ್ಣಿಯಂತೆ ನಮ್ಮ ಮನೆಯನ್ನು ಸಲುಹಿದ್ದರು. ಮನೆಗೆ ಬಂದ ಪ್ರತಿಯೊಬ್ಬರನ್ನೂ ಪ್ರೀತಿ ಮತ್ತು ವಾತ್ಸಲ್ಯದಿಂದ ನೋಡಿಕೊಳ್ಳುತ್ತಿದ್ದರು. ಅವರು ಗಳಿಸಿದ ಪ್ರೀತಿಯೇ ಇಂದು ಜನರ ರೂಪದಲ್ಲಿ ಕಾಣಿಸುತ್ತಿದೆ” ಎಂದು ಭಾವುಕರಾದರು.
“ತಾಯಿಯ 11ನೇ ದಿನದ ಕಾರ್ಯಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಿರೀಕ್ಷೆಗೂ ಮೀರಿ ಜನರು ಆಗಮಿಸುವ ಸಾಧ್ಯತೆ ಇದೆ. ಸಮಾಧಿ ದರ್ಶನ ಹಾಗೂ ಪೂಜೆಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಆಗಮಿಸಿ ತಾಯಿಯ ಆತ್ಮಕ್ಕೆ ಶಾಂತಿ ಕೋರಿ” ಎಂದು ಮನವಿ ಮಾಡಿದರು.
ಗುರುವಾರ ಬೆಳಗ್ಗೆ 10 ಗಂಟೆಯಿಂದ ಪೂಜಾ ವಿಧಿ ವಿಧಾನಗಳು ಆರಂಭವಾಗಲಿದ್ದು, ಬೆಳಗ್ಗೆಯಿಂದ ಸಂಜೆವರೆಗೆ ಪ್ರಸಾದ ವಿನಿಯೋಗ ನಡೆಯಲಿದೆ.
ಚನ್ನಮ್ಮ ಅವರು ಚಿರನಿದ್ರೆ ಮಾಡುತ್ತಿರುವ ಸ್ಥಳ ತಮ್ಮ ಪಾಲಿಗೆ ಪುಣ್ಯಸ್ಥಳವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು. ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನ ಈ ಸ್ಥಳ ಮುಂದಿನ ದಿನಗಳಲ್ಲಿ ದುರ್ಬಲರು ಹಾಗೂ ಅನಾಥರ ಪಾಲಿಗೆ ನೆರವಾಗುವ ಕೇಂದ್ರವಾಗಿ ಬೆಳೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು.



