ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್-2026) ಪ್ರಕ್ರಿಯೆಯಲ್ಲಿ 9,02,947 ಎನ್ಯುಮರೇಷನ್ ಫಾರ್ಮ್ಗಳನ್ನು ವಿತರಿಸುವ ಮೂಲಕ ಶೇ.100 ಸಾಧನೆ ಮಾಡಲಾಗಿದೆ. ಇದುವರೆಗೆ 7,74,971 ಫಾರ್ಮ್ಗಳ ಡಿಜಿಟಲೀಕರಣ ಪೂರ್ಣಗೊಂಡಿದ್ದು, ಶೇ.85.83ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಚುನಾವಣಾ ಆಯೋಗದ ಪರಿಷ್ಕೃತ ವೇಳಾಪಟ್ಟಿಯಂತೆ ಬಿಎಲ್ಒಗಳು ಆಗಸ್ಟ್ 8ರವರೆಗೆ ಮನೆ-ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ಫಾರ್ಮ್ ವಿತರಣೆ ಹಾಗೂ ಸಂಗ್ರಹ ಕಾರ್ಯ ಮುಂದುವರಿಸಲಿದ್ದಾರೆ ಎಂದು ಹೇಳಿದರು.
ಎಸ್ಐಆರ್ ಪ್ರಕ್ರಿಯೆ ಕುರಿತು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತದಾರರು ಬಿಎಲ್ಒಗಳಿಗೆ ಅಗತ್ಯ ದಾಖಲೆ ಹಾಗೂ ಮಾಹಿತಿಯನ್ನು ಒದಗಿಸಬೇಕು. ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಪಾರದರ್ಶಕ ಹಾಗೂ ನಿಖರ ಮತದಾರರ ಪಟ್ಟಿ ಸಿದ್ಧಪಡಿಸುವುದೇ ಈ ವಿಶೇಷ ಪರಿಷ್ಕರಣೆಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ 1,15,655 ಎನ್ಯುಮರೇಷನ್ ಫಾರ್ಮ್ಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ಇದರಲ್ಲಿ 29,907 ಮರಣ ಹೊಂದಿದ ಮತದಾರರು, 66,286 ಶಾಶ್ವತವಾಗಿ ಸ್ಥಳಾಂತರಗೊಂಡವರು, 13,240 ಮಂದಿ ಈಗಾಗಲೇ ಬೇರೆಡೆ ಹೆಸರು ನೋಂದಾಯಿಸಿಕೊಂಡವರು, 5,853 ಗೈರುಹಾಜರಿದ್ದವರು ಹಾಗೂ 369 ವಿವಿಧ ಕಾರಣಗಳಿಂದ ಫಾರ್ಮ್ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿ ವಿವರಿಸಿದರು. ಜಿಲ್ಲೆಯಲ್ಲಿ 967 ಮತಗಟ್ಟೆಗಳು, 967 ಬಿಎಲ್ಒಗಳು, 97 ಬಿಎಲ್ಒ ಮೇಲ್ವಿಚಾರಕರು, 967 ಮತದಾರರ ನೆರವು ಕೇಂದ್ರಗಳು ಹಾಗೂ 161 ಬಿಎಲ್ಒ ನೆರವು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಗಂಗಪ್ಪ ಎಂ., ಬಸನಗೌಡ ಕೋಟೂರ, ನಂದಾ ಹಣಬರಟ್ಟಿ, ಎಸ್.ಡಿ. ಪಾಟೀಲ ಹಾಗೂ ಚುನಾವಣಾ ತಹಶೀಲ್ದಾರ ಸಂತೋಷ ಹಿರೇಮಠ ಉಪಸ್ಥಿತರಿದ್ದರು.
ವಿಧಾನಸಭಾ ಕ್ಷೇತ್ರವಾರು ಡಿಜಿಟಲೀಕರಣ
- ಶಿರಹಟ್ಟಿ – 2,00,222
- ಗದಗ – 1,93,722
- ರೋಣ – 2,06,733
- ನರಗುಂದ – 1,74,294
ಎಸ್ಐಆರ್ ಪರಿಷ್ಕೃತ ವೇಳಾಪಟ್ಟಿ
- ಆಗಸ್ಟ್ 8 – ಫಾರ್ಮ್ ವಿತರಣೆ ಹಾಗೂ ಮತಗಟ್ಟೆಗಳ ಪುನರ್ವಿಂಗಡಣೆ ಪೂರ್ಣ
- ಆಗಸ್ಟ್ 17 – ಕರಡು ಮತದಾರರ ಪಟ್ಟಿ ಪ್ರಕಟಣೆ
- ಆಗಸ್ಟ್ 17ರಿಂದ ಸೆಪ್ಟೆಂಬರ್ 16ರವರೆಗೆ – ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ
- ಅಕ್ಟೋಬರ್ 15ರೊಳಗೆ – ಆಕ್ಷೇಪಣೆಗಳ ವಿಲೇವಾರಿ
- ಅಕ್ಟೋಬರ್ 19 – ಅಂತಿಮ ಮತದಾರರ ಪಟ್ಟಿ ಪ್ರಕಟಣೆ
“ಎಸ್ಐಆರ್ ಕುರಿತು ಊಹಾಪೋಹಗಳಿಗೆ ಕಿವಿಗೊಡದೆ, ಮತದಾರರು ಬಿಎಲ್ಒಗಳಿಗೆ ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸಬೇಕು.”
– ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ



