ರಾಯಚೂರು: ದೇಶಕ್ಕೆ ಚಿನ್ನ ನೀಡುವ ಹಟ್ಟಿ ಚಿನ್ನದ ಗಣಿ ಕಂಪನಿ ವಿರುದ್ಧ ರಾಯಚೂರು ಜಿಲ್ಲೆಯ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಭೂ ಹಕ್ಕಿಗಾಗಿ ಬೀದಿಗಿಳಿದು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.
ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿರುವ ಹಟ್ಟಿ ಚಿನ್ನದ ಗಣಿ ಕಂಪನಿಯ ಮುಖ್ಯ ದ್ವಾರದ ಎದುರು ‘ಹಟ್ಟಿ ಭೂ ಹಕ್ಕು ವಂಚಿತ ರೈತ ಹೋರಾಟ ಸಮಿತಿ’ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ.
ಭೂ ದಾಖಲೆಗಳಲ್ಲಿ ಕಂಪನಿ ಹೆಸರು; ರೈತರ ಸಂಕಷ್ಟ:
ಗಣಿ ಅಭಿವೃದ್ಧಿ ಉದ್ದೇಶಕ್ಕಾಗಿ ಹಟ್ಟಿ-ಕೋಠಾ ಸೀಮಾಂತರದ ಒಟ್ಟು 1,305 ಎಕರೆ ಜಮೀನನ್ನು ಗುತ್ತಿಗೆ ಪಡೆಯಲಾಗಿತ್ತು. ಈ ಪೈಕಿ 915 ಎಕರೆ ಭೂಮಿಯನ್ನು ಮಾತ್ರ ಭೂಸ್ವಾಧೀನಪಡಿಸಿಕೊಂಡು ರೈತರಿಗೆ ಪರಿಹಾರ ಹಾಗೂ ಉದ್ಯೋಗ ನೀಡಲಾಗಿದೆ ಎಂದು ರೈತರು ತಿಳಿಸಿದ್ದಾರೆ.
ಆದರೆ ಉಳಿದ 390 ಎಕರೆ ಜಮೀನನ್ನು ಕಂಪನಿ ಸ್ವಾಧೀನಪಡಿಸಿಕೊಳ್ಳದೇ, ರೈತರ ಗಮನಕ್ಕೂ ತರದೆ ಅವರ ಋಣಭಾರ ಪ್ರಮಾಣಪತ್ರ (EC) ದಾಖಲೆಗಳಲ್ಲಿ ‘ಹಟ್ಟಿ ಚಿನ್ನದ ಗಣಿ’ ಹೆಸರನ್ನು ನಮೂದಿಸಲಾಗಿದೆ ಎಂಬುದು ರೈತರ ಆರೋಪವಾಗಿದೆ.
ಸಾಲ ಸೌಲಭ್ಯವೂ ಇಲ್ಲ, ಪರಿಹಾರವೂ ಇಲ್ಲ:
ದಶಕಗಳಿಂದ ಜಮೀನಿನ ದಾಖಲೆಗಳಲ್ಲಿ ಗಣಿ ಕಂಪನಿಯ ಹೆಸರು ಇರುವ ಕಾರಣ ರೈತರಿಗೆ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಸೇರಿದಂತೆ ಯಾವುದೇ ಸಾಲ ಸೌಲಭ್ಯಗಳು ದೊರೆಯುತ್ತಿಲ್ಲ. ಅಲ್ಲದೆ ಜಮೀನು ಮಾರಾಟಕ್ಕೂ ಅವಕಾಶವಿಲ್ಲದೆ, ಸರ್ಕಾರದಿಂದ ಸಿಗಬೇಕಾದ ಬೆಳೆ ಪರಿಹಾರ ಸೌಲಭ್ಯಗಳೂ ಲಭಿಸುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಈ ಸಮಸ್ಯೆ ಕಳೆದ 18 ವರ್ಷಗಳಿಂದ ಮುಂದುವರಿದಿದ್ದು, ಹಲವು ಬಾರಿ ಮನವಿ ಸಲ್ಲಿಸಿದರೂ ಪರಿಹಾರ ಸಿಕ್ಕಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಕೆ:
ರೈತರ ಜಮೀನು ದಾಖಲೆಗಳಿಂದ ಹಟ್ಟಿ ಚಿನ್ನದ ಗಣಿ ಕಂಪನಿಯ ಹೆಸರನ್ನು ತಕ್ಷಣ ತೆಗೆದುಹಾಕಬೇಕು. ಇಲ್ಲವಾದರೆ ಸಂಪೂರ್ಣ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಸೂಕ್ತ ಪರಿಹಾರ ಹಾಗೂ ಉದ್ಯೋಗ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಬೇಡಿಕೆಗಳು ಈಡೇರುವವರೆಗೂ ಅನಿರ್ದಿಷ್ಟಾವಧಿ ಹೋರಾಟ ಮುಂದುವರಿಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.



