ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ಹೊಸ ದಿನಾಂಕ ನಿಗದಿಯಾಗಿದೆ.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಪಾದಯಾತ್ರೆಯ ದಿನಾಂಕವನ್ನು ಘೋಷಿಸಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ದೇವೇಗೌಡ ಅವರ ನಿಧನದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಪಾದಯಾತ್ರೆಯನ್ನು ಇದೀಗ ಆಗಸ್ಟ್ 9, 10 ಮತ್ತು 11ರಂದು ನಡೆಸಲು ತೀರ್ಮಾನಿಸಲಾಗಿದೆ.
ಆಗಸ್ಟ್ 9ರಂದು ರಾಮನಗರ ಜಿಲ್ಲೆಯ ಭೈರಮಂಗಲದಿಂದ ಪಾದಯಾತ್ರೆ ಆರಂಭವಾಗಲಿದ್ದು, ಆಗಸ್ಟ್ 11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಲಿದೆ. ಅದೇ ದಿನ ಫ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್ ಬೃಹತ್ ಸಮಾವೇಶ ಆಯೋಜಿಸಿದೆ.
ಪಾದಯಾತ್ರೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಮೂರು ದಿನಗಳ ಹೋರಾಟದಲ್ಲಿ ಒಂದು ದಿನ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕೂಡ ಭಾಗಿಯಾಗಲಿದ್ದಾರೆ ಎಂದು ಜೆಡಿಎಸ್ ತಿಳಿಸಿದೆ.
ಬಿಡದಿ ಟೌನ್‌ಶಿಪ್ ಯೋಜನೆ ವಿಚಾರದಲ್ಲಿ ಸರ್ಕಾರದ ವಿರುದ್ಧ ಒತ್ತಡ ಹೆಚ್ಚಿಸುವ ಉದ್ದೇಶದಿಂದ ಜೆಡಿಎಸ್ ಈ ಪಾದಯಾತ್ರೆ ನಡೆಸುತ್ತಿದೆ. ಈ ಬಾರಿ ದೋಸ್ತಿ ಪಕ್ಷ ಬಿಜೆಪಿಯನ್ನು ದೂರವಿಟ್ಟು ಜೆಡಿಎಸ್ ಪ್ರತ್ಯೇಕವಾಗಿ ಹೋರಾಟ ನಡೆಸಲು ನಿರ್ಧರಿಸಿದೆ.
ಪಾದಯಾತ್ರೆ ಬಳಿಕ ಆಗಸ್ಟ್ 14ರಂದು ಜೆಡಿಎಸ್ ವತಿಯಿಂದ ‘ವಿಧಾನಸೌಧ ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧದವರೆಗೆ ಈ ಹೋರಾಟ ನಡೆಯಲಿದೆ.



