ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳ (KMF) ತಯಾರಿಸುತ್ತಿರುವ ನಂದಿನಿ ಪಶು ಆಹಾರದ ಗುಣಮಟ್ಟದ ಕುರಿತು ಗಂಭೀರ ಆರೋಪಗಳು ಕೇಳಿಬಂದಿದ್ದು, ರಾಜಾನುಕುಂಟೆಯ ಕೆಎಂಎಫ್ ಪಶು ಆಹಾರ ಘಟಕದಲ್ಲಿ ಕಳಪೆ ಕಚ್ಚಾ ವಸ್ತುಗಳನ್ನು ಬಳಸಿ ಆಹಾರ ಉತ್ಪಾದನೆ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಈ ಸಂಬಂಧ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಆರೋಪವೂ ಕೇಳಿಬಂದಿದ್ದು, ಕಳೆದ ಎರಡು ತಿಂಗಳಲ್ಲಿ ಕಳಪೆ ಪಶು ಆಹಾರ ಸೇವನೆಯಿಂದ ಸುಮಾರು 1,600 ಹಸುಗಳು ಸಾವನ್ನಪ್ಪಿವೆ ಹಾಗೂ ಸಾವಿರಾರು ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗಿವೆ ಎಂದು ರೈತರು ಆರೋಪಿಸಿದ್ದಾರೆ.
ಆರೋಪಗಳ ಪ್ರಕಾರ, ಪಶು ಆಹಾರ ತಯಾರಿಕೆಗೆ ಅಗತ್ಯವಿರುವ ಕಾಕಂಬಿ (Molasses) ಖರೀದಿಯಲ್ಲಿ ಗುಣಮಟ್ಟದ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಕಡಿಮೆ ಗುಣಮಟ್ಟದ TRS ಹೊಂದಿದ್ದ ಕಚ್ಚಾ ವಸ್ತುಗಳನ್ನು ಖರೀದಿಸಿ, ಲ್ಯಾಬ್ ಪರೀಕ್ಷೆಯಲ್ಲಿ ಗುಣಮಟ್ಟ ದೃಢಪಡಿಸದೇ ಸುಮಾರು 86,000 ಮೆಟ್ರಿಕ್ ಟನ್ ಪಶು ಆಹಾರವನ್ನು ಉತ್ಪಾದಿಸಲಾಗಿದೆ ಎನ್ನಲಾಗಿದೆ.
ಕಳಪೆ ಗುಣಮಟ್ಟದ ಆಹಾರ ಸೇವನೆಯಿಂದ ಹಸುಗಳ ಆರೋಗ್ಯ ಹದಗೆಟ್ಟಿದ್ದು, ಹಾಲಿನ ಉತ್ಪಾದನೆ ಕುಸಿದಿದೆ ಎಂದು ರೈತರು ದೂರಿದ್ದಾರೆ. ಕೆಟ್ಟ ವಾಸನೆ ಹಾಗೂ ಕಳಪೆ ಗುಣಮಟ್ಟದಿಂದ ಹಸುಗಳು ಆಹಾರ ಸೇವಿಸಲು ನಿರಾಕರಿಸುತ್ತಿದ್ದು, ಹಲವು ಜಾನುವಾರುಗಳು ಗರ್ಭಧಾರಣೆಯ ಸಮಸ್ಯೆ, ಅನಾರೋಗ್ಯ ಹಾಗೂ ಸಾವಿಗೆ ಒಳಗಾಗಿವೆ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಆನೇಕಲ್, ನೆಲಮಂಗಲ, ರಾಮನಗರ ಹಾಗೂ ಚನ್ನಪಟ್ಟಣ ಭಾಗದ ಹೈನುಗಾರರು ಈ ಬೆಳವಣಿಗೆಯಿಂದ ಆತಂಕಗೊಂಡಿದ್ದಾರೆ. ಹಾಲು ಸಂಗ್ರಹ ಕೇಂದ್ರಗಳಲ್ಲಿ ರೈತರಿಗೆ ನಂದಿನಿ ಪಶು ಆಹಾರವನ್ನೇ ಖರೀದಿಸುವಂತೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಬಮೂಲ್ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಸುಮಾರು 14,500 ಮೆಟ್ರಿಕ್ ಟನ್ ಪಶು ಆಹಾರ ಮಾರಾಟವಾಗುತ್ತಿದ್ದು, ಕಳಪೆ ಆಹಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರೈತರು ಟನ್‌ಗಟ್ಟಲೆ ಪಶು ಆಹಾರವನ್ನು ರಾಜಾನುಕುಂಟೆ ಘಟಕಕ್ಕೆ ಹಿಂತಿರುಗಿಸುತ್ತಿದ್ದಾರೆ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.



