ಬೆಳಗಾವಿ: ನಗರದ ಚವ್ಹಾಟ ಗಲ್ಲಿಯಲ್ಲಿ ನಡೆದ ಫ್ರಿಡ್ಜ್ ಸ್ಫೋಟ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಂದೆ ಹಾಗೂ ಮಗ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಗಜಾನನ ದಮೋನೆ (61) ಮತ್ತು ರೋಷನ್ ದಮೋನೆ (21) ಮೃತಪಟ್ಟವರು.
ಸೆಪ್ಟೆಂಬರ್ 14ರಂದು ಗಣೇಶೋತ್ಸವದ ಸಂಭ್ರಮದ ನಡುವೆಯೇ ದಮೋನೆ ಕುಟುಂಬ ವಾಸವಿದ್ದ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಫ್ರಿಡ್ಜ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿತ್ತು. ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಇದೇ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಗಜಾನನ ದಮೋನೆ ಹಾಗೂ ರೋಷನ್ ದಮೋನೆ ಅವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಇಬ್ಬರೂ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಕುಟುಂಬಸ್ಥರು ಬದುಕಿ ಬರಲಿ ಎಂದು ಪ್ರಾರ್ಥಿಸುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಬ್ಬರೂ ಕೊನೆಯುಸಿರೆಳೆದಿದ್ದಾರೆ.
ತಂದೆ-ಮಗನ ಸಾವಿನೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಘಟನೆಯ ಕುರಿತು ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



