ಬೆಂಗಳೂರು: ರಾಜ್ಯದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯ ಲಿಖಿತ ಪರೀಕ್ಷೆ ಆಗಸ್ಟ್ 2ರಂದು ನಡೆಯಲಿದ್ದು, ಪರೀಕ್ಷೆಯನ್ನು ಪಾರದರ್ಶಕ ಹಾಗೂ ಅಕ್ರಮಮುಕ್ತವಾಗಿ ನಡೆಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಪರೀಕ್ಷೆಗೆ ಸಂಬಂಧಿಸಿದ ಉಡುಪು ನಿಯಮಗಳು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ಅಭ್ಯರ್ಥಿಗಳಿಗೆ ಪ್ರಕಟಿಸಲಾಗಿದೆ.
ಈ ಕುರಿತು ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಪರೀಕ್ಷೆಯ ವೇಳೆ ಹಿಜಾಬ್ ಸೇರಿದಂತೆ ಮುಖ, ತಲೆ ಅಥವಾ ಕಿವಿಯನ್ನು ಮುಚ್ಚುವ ಯಾವುದೇ ರೀತಿಯ ಉಡುಪುಗಳಿಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಧಾರ್ಮಿಕ ಉಡುಪುಗಳ ಬಗ್ಗೆ ಯಾವುದೇ ಗೊಂದಲ ಉಂಟಾಗದಂತೆ ಎಲ್ಲಾ ನಿಯಮಗಳನ್ನು ಪ್ರವೇಶ ಪತ್ರದಲ್ಲೇ ಸ್ಪಷ್ಟವಾಗಿ ಉಲ್ಲೇಖಿಸಲಾಗುತ್ತದೆ ಎಂದರು.
ಪರೀಕ್ಷಾ ಕೇಂದ್ರಗಳಲ್ಲಿ 24 ಗಂಟೆಗಳ ಮುಂಚಿತವಾಗಿ ಸ್ಯಾನಿಟೈಸೇಶನ್ ಕಾರ್ಯ ನಡೆಯಲಿದ್ದು, ಪರೀಕ್ಷಾ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೂ ಮೊಬೈಲ್ ಫೋನ್ ಬಳಕೆಗೆ ಅವಕಾಶ ಇರುವುದಿಲ್ಲ. ಪರೀಕ್ಷೆಗೆ ಸಂಬಂಧಿಸಿದಂತೆ ಖಾಸಗಿ ತರಬೇತಿ ಕೇಂದ್ರಗಳ ಮೇಲೂ ವಿಶೇಷ ನಿಗಾ ವಹಿಸಲಾಗುವುದು ಎಂದು ಅವರು ತಿಳಿಸಿದರು.
ಜನಿವಾರ, ಶಿವದಾರ, ಉಡದಾರ, ಮಾಂಗಲ್ಯ ಸರ, ಮುಗುತಿ, ಕುಂಕುಮ, ಉಂಗುರ, ತಾಯತ ಸೇರಿದಂತೆ ಧರಿಸಬಹುದಾದ ವಸ್ತುಗಳ ಕುರಿತು ಅಭ್ಯರ್ಥಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುತ್ತದೆ. ಪರೀಕ್ಷಾ ಕೇಂದ್ರಕ್ಕೆ ಸುಮಾರು ಎರಡೂವರೆ ಗಂಟೆ ಮುಂಚಿತವಾಗಿ ಆಗಮಿಸಿ ಪರಿಶೀಲನೆಗೆ ಒಳಗಾಗುವಂತೆ ಸೂಚಿಸಲಾಗಿದೆ.
ಇದೇ ವೇಳೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಎಚ್. ಅವರು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರಸಂಹಿತೆ ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.
ಪರೀಕ್ಷೆಯ ಪ್ರಮುಖ ನಿಯಮಗಳು:
- ಹಿಜಾಬ್ ಸೇರಿದಂತೆ ತಲೆ, ಕಿವಿ ಅಥವಾ ಮುಖ ಮುಚ್ಚುವ ಉಡುಪುಗಳಿಗೆ ಅವಕಾಶವಿಲ್ಲ.
- ಶೂ, ಟೋಪಿ ಹಾಗೂ ಹೆಚ್ಚಿನ ಜೇಬುಗಳಿರುವ ಜೀನ್ಸ್ ಧರಿಸುವಂತಿಲ್ಲ.
- ಪರೀಕ್ಷಾ ಕೊಠಡಿಗೆ ಮೊಬೈಲ್, ನೀರಿನ ಬಾಟಲಿ, ಆಹಾರ ಪದಾರ್ಥ, ಪುಸ್ತಕ, ಚೀಟಿ, ನೋಟ್‌ಪ್ಯಾಡ್, ಪ್ಲಾಸ್ಟಿಕ್ ಪೌಚ್, ಸ್ಕೆಲ್, ರಬ್ಬರ್, ಪೆನ್ಸಿಲ್ ಬಾಕ್ಸ್ ಸೇರಿದಂತೆ ಯಾವುದೇ ನಿಷೇಧಿತ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ.
- ಅಭ್ಯರ್ಥಿಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು.
ಪರೀಕ್ಷೆಯನ್ನು ಅಕ್ರಮರಹಿತವಾಗಿ ನಡೆಸುವ ಉದ್ದೇಶದಿಂದ ಈ ಎಲ್ಲಾ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



