ಆನೇಕಲ್: ಕುಡಿದ ಅಮಲಿನಲ್ಲಿ ಟೆಕ್ಕಿಯೊಬ್ಬ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಿಂದ ಏರ್‌ಗನ್‌ನಿಂದ ಅಡ್ಡಾದಿಡ್ಡಿ ಫೈರಿಂಗ್ ನಡೆಸಿ ನಿವಾಸಿಗಳನ್ನು ಬೆಚ್ಚಿಬೀಳಿಸಿದ ಘಟನೆ ಬೆಂಗಳೂರಿನ ಹೊರವಲಯದ ಆನೇಕಲ್ ತಾಲೂಕಿನ ಬಂಡಾಪುರ ಸಮೀಪದ ಸಿಪಾನಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಕಾರುಗಳು, ಪಾರ್ಕಿಂಗ್ ಪ್ರದೇಶ ಹಾಗೂ ಸೆಕ್ಯುರಿಟಿ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಸುಮಾರು 45 ನಿಮಿಷಗಳ ಕಾಲ ನಡೆಸಿದ ಫೈರಿಂಗ್‌ನಿಂದ ಭಾರೀ ಆತಂಕ ಉಂಟಾಯಿತು. ಆರೋಪಿ ಅನುರಾಗ್ ತಿವಾರಿಯನ್ನು ಸೂರ್ಯನಗರ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಲಕ್ನೋ ಮೂಲದ 40 ವರ್ಷದ ಅನುರಾಗ್ ತಿವಾರಿ ವೈಟ್‌ಫೀಲ್ಡ್‌ನ ಖಾಸಗಿ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಕಳೆದ ಎಂಟು ತಿಂಗಳಿಂದ ಅಪಾರ್ಟ್‌ಮೆಂಟ್‌ನ B304 ಫ್ಲಾಟ್‌ನಲ್ಲಿ ವಾಸವಾಗಿದ್ದರು. ಘಟನೆ ನಡೆದ ರಾತ್ರಿ ಕಂಠಪೂರ್ತಿ ಮದ್ಯ ಸೇವಿಸಿದ್ದ ಆತ ಮೊದಲು ಫ್ಲಾಟ್‌ನೊಳಗೆ ಜೋರಾಗಿ ಗಲಾಟೆ ನಡೆಸಿದ್ದಾನೆ.
ನಂತರ ಮಧ್ಯರಾತ್ರಿ ಸುಮಾರು 2.30ರ ವೇಳೆಗೆ ಬಾಲ್ಕನಿಗೆ ಬಂದು ಕೆಳಗಿದ್ದ ಕಾರುಗಳು ಹಾಗೂ ಪಾರ್ಕಿಂಗ್ ಶೆಡ್ ಮೇಲೆ ಏರ್‌ಗನ್‌ನಿಂದ ಗುಂಡು ಹಾರಿಸಲು ಆರಂಭಿಸಿದ್ದಾನೆ. ಫೈರಿಂಗ್ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ ಸೆಕ್ಯುರಿಟಿ ಗಾರ್ಡ್‌ಗಳ ಮೇಲೆಯೂ ಶೂಟ್ ಮಾಡಿದ್ದಾನೆ. ಈ ಘಟನೆ ಸುಮಾರು 45 ನಿಮಿಷಗಳ ಕಾಲ ಮುಂದುವರಿದಿದ್ದು, ಅಪಾರ್ಟ್‌ಮೆಂಟ್ ನಿವಾಸಿಗಳು ಭಯಭೀತರಾಗಿದ್ದರು.
ಫೈರಿಂಗ್‌ನಲ್ಲಿ ಹಲವು ಕಾರುಗಳ ಗಾಜುಗಳು ಜಖಂಗೊಂಡಿವೆ. ಕಾರು ಮಾಲೀಕ ಬಿದ್ಯುತ್ ನೀಡಿದ ದೂರಿನ ಮೇರೆಗೆ ಸೂರ್ಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಸೋಕೋ ತಂಡ ಏರ್‌ಗನ್ ಬಾಲ್ಸ್ ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದು, ಕೃತ್ಯಕ್ಕೆ ಬಳಸಿದ ಏರ್‌ಗನ್‌ನ್ನೂ ಜಪ್ತಿ ಮಾಡಿದೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಯು ಮದ್ಯದ ಅಮಲಿನಲ್ಲಿ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.



