ಮಳೆಮಾಪನವೇ ಸರಿಯಿಲ್ಲದಿದ್ದರೆ ಬರ ನಿರ್ಧಾರ ಹೇಗೆ?
ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯಲ್ಲಿ ವಾಸ್ತವ ಮಳೆ ಪ್ರಮಾಣ ದಾಖಲಿಸಬೇಕಾದ ಮಳೆಮಾಪನ ಯಂತ್ರಗಳೇ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದಾದರೆ, ಬರ ಘೋಷಣೆಗೆ ಯಾವ ಅಂಕಿಅಂಶಗಳನ್ನು ಆಧಾರವಾಗಿಸಲಾಗಿದೆ ಎಂಬ ಪ್ರಶ್ನೆ ಎದುರಾಗಿದೆ. ಜಿಲ್ಲೆಯಲ್ಲಿ ಶೇ.90ರಷ್ಟು ಮಳೆಮಾಪನ ಯಂತ್ರಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿರುವ ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಅನಿಲ ಮೆಣಸಿನಕಾಯಿ, ತಪ್ಪಾದ ಅಥವಾ ಅಪೂರ್ಣ ಮಳೆ ದಾಖಲೆಗಳಿಂದ ಗದಗ ಜಿಲ್ಲೆ ಬರ ಘೋಷಣೆಯಿಂದ ಹೊರಗುಳಿದಿದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಎಷ್ಟು ಮಳೆಯಾಗಿದೆ, ಎಷ್ಟು ಮಳೆ ಕೊರತೆಯಾಗಿದೆ ಹಾಗೂ ಯಾವ ಪ್ರದೇಶಗಳು ಬರದಿಂದ ತೀವ್ರವಾಗಿ ಬಾಧಿತವಾಗಿವೆ ಎಂಬುದನ್ನು ನಿರ್ಧರಿಸಲು ಮಳೆಮಾಪನ ಕೇಂದ್ರಗಳ ದಾಖಲೆಗಳು ಪ್ರಮುಖವಾಗಿವೆ. ಆದರೆ ಗದಗ ಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ಹಲವು ಮಳೆಮಾಪನ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿಸಿದ್ದಾರೆ.
ಮಳೆಮಾಪನ ಯಂತ್ರಗಳು ಕಾರ್ಯನಿರ್ವಹಿಸದಿದ್ದರೆ ಮಳೆ ಪ್ರಮಾಣದ ದಾಖಲೆಗಳಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆಯಿದೆ. ಇದರಿಂದ ವಾಸ್ತವದಲ್ಲಿ ಬೆಳೆಗಳು ಒಣಗಿದ್ದರೂ, ಜಲಮೂಲಗಳು ಬತ್ತಿದ್ದರೂ ಹಾಗೂ ರೈತರು ಆರ್ಥಿಕ ಸಂಕಷ್ಟದಲ್ಲಿದ್ದರೂ, ಅಧಿಕೃತ ಅಂಕಿಅಂಶಗಳಲ್ಲಿ ಬರದ ತೀವ್ರತೆ ಸಮರ್ಪಕವಾಗಿ ದಾಖಲಾಗದೇ ಹೋಗಬಹುದು ಎಂದು ಅವರು ಹೇಳಿದ್ದಾರೆ.
ಸರ್ಕಾರಕ್ಕೆ ಹಲವು ಪ್ರಶ್ನೆ
ಜಿಲ್ಲೆಯಲ್ಲಿ ಒಟ್ಟು ಎಷ್ಟು ಮಳೆಮಾಪನ ಯಂತ್ರಗಳಿವೆ, ಅವುಗಳಲ್ಲಿ ಎಷ್ಟು ಕಾರ್ಯನಿರ್ವಹಿಸುತ್ತಿವೆ, ಕಾರ್ಯನಿರ್ವಹಿಸದ ಯಂತ್ರಗಳ ಕೊನೆಯ ತಾಂತ್ರಿಕ ಪರಿಶೀಲನೆ ಯಾವಾಗ ನಡೆದಿದೆ, ದೋಷಪೂರಿತ ಯಂತ್ರಗಳ ಮಾಹಿತಿ ಸರ್ಕಾರಕ್ಕೆ ನೀಡಲಾಗಿತ್ತೇ ಹಾಗೂ ಬರ ಘೋಷಣೆಗೆ ಯಾವ ಮಳೆ ಅಂಕಿಅಂಶಗಳನ್ನು ಆಧಾರವಾಗಿಸಲಾಗಿದೆ ಎಂಬುದನ್ನು ಸರ್ಕಾರ ಮತ್ತು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕು ಎಂದು ಅನಿಲ ಮೆಣಸಿನಕಾಯಿ ಒತ್ತಾಯಿಸಿದ್ದಾರೆ.
ಯಂತ್ರಗಳು ಕಾರ್ಯನಿರ್ವಹಿಸದ ದಿನಗಳ ಮಳೆ ಪ್ರಮಾಣವನ್ನು ಹೇಗೆ ಲೆಕ್ಕಹಾಕಲಾಗಿದೆ ಎಂಬುದನ್ನೂ ಬಹಿರಂಗಪಡಿಸಬೇಕು. ತಾಲೂಕುವಾರು, ಹೋಬಳಿವಾರು ಹಾಗೂ ಗ್ರಾಮವಾರು ಮಳೆಮಾಪನ ಯಂತ್ರಗಳ ಸ್ಥಿತಿಗತಿ, ಕಾರ್ಯನಿರ್ವಹಣಾ ದಾಖಲೆ, ತಾಂತ್ರಿಕ ಪರಿಶೀಲನೆಯ ದಿನಾಂಕ ಹಾಗೂ ದಾಖಲಾದ ಮಳೆಯ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಆಗ್ರಹಿಸಿದ್ದಾರೆ.
ಹೊಲದ ವಾಸ್ತವ ಸ್ಥಿತಿಯೂ ಪರಿಗಣಿಸಿ
ಬರ ಪರಿಸ್ಥಿತಿ ನಿರ್ಧರಿಸುವಾಗ ಕೇವಲ ದೋಷಪೂರಿತ ಯಂತ್ರಗಳ ಅಂಕಿಅಂಶಗಳನ್ನೇ ಅವಲಂಬಿಸದೆ, ಉಪಗ್ರಹ ಮಾಹಿತಿ, ಜಲಾಶಯ ಹಾಗೂ ಅಂತರ್ಜಲದ ಸ್ಥಿತಿ, ಬಿತ್ತನೆ ಪ್ರಮಾಣ, ಬೆಳೆ ಒಣಗಿರುವ ಪ್ರಮಾಣ, ಮಣ್ಣಿನ ತೇವಾಂಶ ಮತ್ತು ಗ್ರಾಮಮಟ್ಟದ ಜಂಟಿ ಸಮೀಕ್ಷೆಯನ್ನೂ ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ.
ರೈತರ ಹೊಲಗಳ ವಾಸ್ತವ ಪರಿಸ್ಥಿತಿ ಹಾಗೂ ಬೆಳೆನಷ್ಟದ ಸ್ಥಳ ಪರಿಶೀಲನೆ ನಡೆಸಿ, ಅಗತ್ಯವಿರುವ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ತಾಂತ್ರಿಕ ದೋಷ ಅಥವಾ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರಿಗೆ ಬರ ಪರಿಹಾರ, ಬೆಳೆನಷ್ಟ ಪರಿಹಾರ, ವಿಮಾ ಸೌಲಭ್ಯ ಹಾಗೂ ಇತರ ಸರ್ಕಾರಿ ನೆರವು ಕೈತಪ್ಪಿದರೆ ಅದು ರೈತರಿಗೆ ಗಂಭೀರ ಅನ್ಯಾಯವಾಗಲಿದೆ ಎಂದು ತಿಳಿಸಿದ್ದಾರೆ.
ಮಳೆಮಾಪನ ಯಂತ್ರಗಳೇ ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ, ಅವುಗಳ ಅಂಕಿಅಂಶಗಳ ಆಧಾರದಲ್ಲಿ ಬರ ಪರಿಸ್ಥಿತಿ ನಿರ್ಧರಿಸುವುದು ಹೇಗೆ? ಯಂತ್ರಗಳ ನಿರ್ವಹಣಾ ವೈಫಲ್ಯಕ್ಕೆ ರೈತರನ್ನು ಹೊಣೆ ಮಾಡುವುದು ಯಾವ ನ್ಯಾಯ? ಸರ್ಕಾರ ಮತ್ತು ಜಿಲ್ಲಾಡಳಿತ ಮಳೆಮಾಪನ ವ್ಯವಸ್ಥೆಯ ಸಂಪೂರ್ಣ ವರದಿಯನ್ನು ಬಹಿರಂಗಪಡಿಸಿ, ಗದಗದ ಬರ ಪರಿಸ್ಥಿತಿಯನ್ನು ಮರುಪರಿಶೀಲಿಸಬೇಕು.
— ಅನಿಲ ಮೆಣಸಿನಕಾಯಿ, ಬಿಜೆಪಿ ಪರಾಜಿತ ಅಭ್ಯರ್ಥಿ



