ಚಿಕ್ಕಮಗಳೂರು: ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಶೃಂಗೇರಿ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಶೃಂಗೇರಿ ತಾಲೂಕು ಬಂದ್ ನಡೆಸಲಾಯಿತು.
ಶೃಂಗೇರಿ ರೈತ ಒಕ್ಕೂಟ, ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿದವು. ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆಗೆ ಕೈಜೋಡಿಸಿದರು.
ಶೃಂಗೇರಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಈ ವೇಳೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕಸ್ತೂರಿರಂಗನ್ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿದರು.
ಕಳೆದೊಂದು ತಿಂಗಳಿಂದ ವರದಿ ಜಾರಿ ವಿರೋಧಿಸಿ ಮಲೆನಾಡು ಭಾಗದಲ್ಲಿ ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ. ಭವಿಷ್ಯದ ಬದುಕು ಹಾಗೂ ಕೃಷಿ ಭೂಮಿಯ ರಕ್ಷಣೆಗೆ ಆಗ್ರಹಿಸಿ ರೈತರು ಮತ್ತು ಗ್ರಾಮಸ್ಥರು ಹೋರಾಟ ನಡೆಸುತ್ತಿದ್ದಾರೆ.
ಕಸ್ತೂರಿರಂಗನ್ ವರದಿ ಜಾರಿಯಾದರೆ ಮಲೆನಾಡಿನ ಐದು ತಾಲೂಕುಗಳ 137ಕ್ಕೂ ಹೆಚ್ಚು ಗ್ರಾಮಗಳ ಮೇಲೆ ಪರಿಣಾಮ ಬೀರುವ ಆತಂಕವಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಕಾಫಿನಾಡಿನಲ್ಲಿ ಸುಮಾರು 3,666 ಚದರ ಕಿಲೋಮೀಟರ್ ವ್ಯಾಪ್ತಿಗೆ ಸಂಬಂಧಿಸಿದ ವರದಿ ಜನರಲ್ಲಿ ಭವಿಷ್ಯದ ಕುರಿತು ಆತಂಕ ಮೂಡಿಸಿದೆ ಎಂದು ಅವರು ತಿಳಿಸಿದ್ದಾರೆ.
ಕೇರಳ ಮಾದರಿಯಲ್ಲಿ ಜನವಸತಿ ಪ್ರದೇಶಗಳು ಹಾಗೂ ಕೃಷಿ ಭೂಮಿಯನ್ನು ಹೊರತುಪಡಿಸಿ ಯೋಜನೆ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.



