ಕೊಪ್ಪಳ: ಮನೆಯ ಕಂಪೌಂಡ್ನಲ್ಲಿ ತಿರುಗಾಡುತ್ತಿದ್ದ 91 ವರ್ಷದ ವೃದ್ಧೆಯ ಮೇಲೆ ಕೋತಿಯೊಂದು ಏಕಾಏಕಿ ದಾಳಿ ಮಾಡಿ ಕೆಡವಿದ ಘಟನೆ ಕೊಪ್ಪಳದ ಬಿ.ಟಿ. ಪಾಟೀಲ್ ನಗರದಲ್ಲಿ ನಡೆದಿದೆ.
ದಾಳಿಯಲ್ಲಿ ಗಾಯಗೊಂಡಿದ್ದ ವೃದ್ಧೆ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದರೂ, ಆಸ್ಪತ್ರೆಗೆ ದಾಖಲಾದ ಮರುದಿನ ಮೃತಪಟ್ಟಿದ್ದಾರೆ.
ಮೃತರನ್ನು ನಜಮುನ್ನೀಸಾ ಬೇಗಂ ಎಂದು ಗುರುತಿಸಲಾಗಿದೆ. ಅವರು ಹಿರಿಯ ಸಾಹಿತಿ ಎಂ.ಎಸ್. ಸವದತ್ತಿ ಅವರ ಪತ್ನಿಯಾಗಿದ್ದಾರೆ.
ಮನೆಯ ಕಂಪೌಂಡ್ನಲ್ಲಿ ವೃದ್ಧೆ ತಿರುಗಾಡುತ್ತಿದ್ದ ಸಂದರ್ಭದಲ್ಲಿ ಕೋತಿ ಏಕಾಏಕಿ ದಾಳಿ ಮಾಡಿದೆ. ದಾಳಿಯ ವೇಳೆ ಅವರು ನೆಲಕ್ಕೆ ಬಿದ್ದಿದ್ದಾರೆ. ತಾಯಿಯನ್ನು ಎಬ್ಬಿಸಲು ಮಗಳು ಮುಂದಾದಾಗ, ಆಕೆಯ ಮೇಲೂ ಕೋತಿ ದಾಳಿ ಮಾಡಿದೆ ಎನ್ನಲಾಗಿದೆ.
ಕೋತಿ ದಾಳಿಯಿಂದ ಗಾಯಗೊಂಡ ನಜಮುನ್ನೀಸಾ ಬೇಗಂ ಅವರನ್ನು ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಯ ಬಳಿಕ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು ಎನ್ನಲಾಗಿದೆ. ಆದರೆ ಆಸ್ಪತ್ರೆಗೆ ದಾಖಲಾದ ಮರುದಿನವೇ ಅವರು ಮೃತಪಟ್ಟಿದ್ದಾರೆ.
ಘಟನೆ ಕುರಿತು ಹೆಚ್ಚಿನ ಮಾಹಿತಿ ಹಾಗೂ ಸಾವಿನ ನಿಖರ ಕಾರಣದ ಬಗ್ಗೆ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.



