ತಮಿಳುನಾಡು: ವರನಟ ಡಾ. ರಾಜ್ಕುಮಾರ್ ಅವರ ಸಂಬಂಧಿಕರ ಮನೆಯಲ್ಲಿ ಸಂಭವಿಸಿದ ನಿಗೂಢ ಸ್ಫೋಟ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ತಮಿಳುನಾಡಿನ ಗಾಜನೂರಿನಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಈರೋಡ್ ಜಿಲ್ಲಾ ಪೊಲೀಸರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ.

ಮನೆಯ ಬಳಿ ಸ್ಫೋಟಗೊಂಡಿರುವುದು ನಾಡಬಾಂಬ್ ಅಥವಾ ಕಚ್ಚಾ ಬಾಂಬ್ ಅಲ್ಲ, ಪಟಾಕಿ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಪೊಲೀಸರ ಈ ಹೇಳಿಕೆಯನ್ನು ಕುಟುಂಬಸ್ಥರು ತೀವ್ರವಾಗಿ ವಿರೋಧಿಸಿದ್ದು, ತಮ್ಮ ಮನೆಯ ಮೇಲೆ ಕಚ್ಚಾ ಬಾಂಬ್ ದಾಳಿಯೇ ನಡೆದಿದೆ ಎಂದು ಆರೋಪಿಸಿದ್ದಾರೆ.
ಗಾಜನೂರಿನಲ್ಲಿರುವ ಡಾ. ರಾಜ್ಕುಮಾರ್ ಅವರ ಸಂಬಂಧಿಕರ ಮನೆಯಲ್ಲಿ ರಾತ್ರಿ 10.22ರ ಸುಮಾರಿಗೆ ನಿಗೂಢ ಸ್ಫೋಟ ಸಂಭವಿಸಿತ್ತು. ಸ್ಫೋಟದ ತೀವ್ರತೆಗೆ ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿದ್ದವು. ಘಟನೆಯಿಂದ ಮನೆಯ ಬಾಗಿಲಿಗೂ ಹಾನಿಯಾಗಿದ್ದು, ಸೋಫಾಗೆ ಬೆಂಕಿ ತಗುಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಸಿಡಿದ ಪರಿಣಾಮ ಈ ಘಟನೆ ಸಂಭವಿಸಿರಬಹುದು ಎಂದು ಆರಂಭದಲ್ಲಿ ಶಂಕಿಸಲಾಗಿತ್ತು. ಆದರೆ ಸ್ಫೋಟದ ತೀವ್ರತೆ ಹಾಗೂ ಮನೆಗೆ ಉಂಟಾದ ಹಾನಿಯನ್ನು ಗಮನಿಸಿದಾಗ ಕಚ್ಚಾ ಬಾಂಬ್ ಸ್ಫೋಟಗೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಘಟನಾ ಸ್ಥಳದಿಂದ ಸ್ಫೋಟಕದ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲನೆಗೆ ಮುಂದಾಗಿದ್ದರು.
ಕಚ್ಚಾ ಬಾಂಬ್ ಅಲ್ಲ, ಪಟಾಕಿ ಸ್ಫೋಟ ಎಂದ ಪೊಲೀಸರು
ಪ್ರಕರಣಕ್ಕೆ ಸಂಬಂಧಿಸಿದಂತೆ ಈರೋಡ್ ಜಿಲ್ಲಾ ಪೊಲೀಸರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಸ್ಫೋಟದ ಕುರಿತು ಸ್ಪಷ್ಟನೆ ನೀಡಿದ್ದಾರೆ. ಗಾಜನೂರಿನ ಮನೆಯಲ್ಲಿ ಸಂಭವಿಸಿರುವುದು ನಾಡಬಾಂಬ್ ಅಥವಾ ಕಚ್ಚಾ ಬಾಂಬ್ ಸ್ಫೋಟವಲ್ಲ. ಪಟಾಕಿಯ ಜೋರಾದ ಶಬ್ದ ಮತ್ತು ಸ್ಫೋಟದ ಪರಿಣಾಮ ಮನೆಯ ಕಿಟಕಿ ಗಾಜುಗಳು ಒಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಘಟನೆಗೆ ಸಂಬಂಧಿಸಿದಂತೆ ತಾಳವಾಡಿ ಪೊಲೀಸರು ಸ್ಥಳೀಯ ಐವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಈ ಐವರು ಘಟನಾ ಸ್ಥಳದ ಸಮೀಪದಲ್ಲೇ ಇದ್ದರು ಎನ್ನಲಾಗಿದೆ. ಹೀಗಾಗಿ ಘಟನೆಗೂ ಇವರಿಗೂ ಸಂಬಂಧವಿದೆಯೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ಪೊಲೀಸರ ಹೇಳಿಕೆಗೆ ಕುಟುಂಬಸ್ಥರ ತೀವ್ರ ಆಕ್ಷೇಪ
ಮತ್ತೊಂದೆಡೆ ಪೊಲೀಸರ ಸ್ಪಷ್ಟನೆಯನ್ನು ಡಾ. ರಾಜ್ಕುಮಾರ್ ಅವರ ಸಂಬಂಧಿಕರು ಒಪ್ಪಿಕೊಂಡಿಲ್ಲ. ತಮ್ಮ ಮನೆಯ ಮೇಲೆ ನಡೆದಿರುವುದು ಕಚ್ಚಾ ಬಾಂಬ್ ದಾಳಿಯೇ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪಟಾಕಿ ಸ್ಫೋಟದಿಂದ ಇಷ್ಟೊಂದು ಹಾನಿಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಕುಟುಂಬಸ್ಥರು, ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯಬಾರದು ಎಂದು ಒತ್ತಾಯಿಸಿದ್ದಾರೆ.
ಪಟಾಕಿ ಸಿಡಿದರೆ ಮನೆಯ ಬಾಗಿಲು ಒಡೆದುಹೋಗಲು ಸಾಧ್ಯವೇ? ಕಿಟಕಿ ಗಾಜುಗಳೆಲ್ಲ ಪುಡಿಪುಡಿಯಾಗಿವೆ. ಬಾಗಿಲು ಜಖಂಗೊಂಡಿದೆ. ಮನೆಯೊಳಗಿನ ಸೋಫಾಗೆ ಬೆಂಕಿ ತಗುಲಿದೆ. ಕೇವಲ ಪಟಾಕಿಯಿಂದ ಇಷ್ಟೆಲ್ಲ ಹಾನಿಯಾಗಲು ಹೇಗೆ ಸಾಧ್ಯ ಎಂದು ಕುಟುಂಬಸ್ಥರು ಪ್ರಶ್ನಿಸಿದ್ದಾರೆ.
ಮನೆಯ ಮುಂದೆ ಸ್ಫೋಟಗೊಂಡಿರುವುದು ಸಾಮಾನ್ಯ ಪಟಾಕಿಯಲ್ಲ, ಸ್ಫೋಟಕ ವಸ್ತು ಎಂಬುದು ತಮ್ಮ ಅನುಮಾನವಾಗಿದೆ ಎಂದು ಅವರು ತಿಳಿಸಿದ್ದಾರೆ.
ನಾವು ರಾಜ್ಕುಮಾರ್ ಸಂಬಂಧಿಕರೇ, ಸುಳ್ಳು ಅಪಪ್ರಚಾರ ಬೇಡ!
ಘಟನೆಗೆ ಸಂಬಂಧಿಸಿದಂತೆ ತಮ್ಮ ಕುಟುಂಬದ ಬಗ್ಗೆ ಹರಡುತ್ತಿರುವ ಮಾಹಿತಿಗೂ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾವು ಡಾ. ರಾಜ್ಕುಮಾರ್ ಅವರ ಸಂಬಂಧಿಕರೇ ಆಗಿದ್ದು, ಈ ವಿಚಾರದಲ್ಲಿ ಸುಳ್ಳು ಅಪಪ್ರಚಾರ ಮಾಡಬಾರದು ಎಂದು ಮನವಿ ಮಾಡಿದ್ದಾರೆ.
ಅಲ್ಲದೆ, ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಸ್ಫೋಟದ ಹಿಂದಿನ ನಿಜವಾದ ಕಾರಣವನ್ನು ಪತ್ತೆಹಚ್ಚಬೇಕು. ಯಾವುದೇ ಕಾರಣಕ್ಕೂ ಪ್ರಕರಣವನ್ನು ಮುಚ್ಚಿಹಾಕುವ ಕೆಲಸವಾಗಬಾರದು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.










