HomeGadag Newsಗದಗ ಬರ ಘೋಷಣೆಗೆ ಡೆಡ್‌ಲೈನ್; ಎಚ್.ಕೆ. ಪಾಟೀಲ್ ಸ್ಫೋಟಕ ಘೋಷಣೆ!

ಗದಗ ಬರ ಘೋಷಣೆಗೆ ಡೆಡ್‌ಲೈನ್; ಎಚ್.ಕೆ. ಪಾಟೀಲ್ ಸ್ಫೋಟಕ ಘೋಷಣೆ!

ಗದಗ: ಗದಗ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸದಿರುವುದಕ್ಕೆ ರೈತರ ಆಕ್ರೋಶ ಕಟ್ಟೆಯೊಡೆದ ಬೆನ್ನಲ್ಲೇ ಶಾಸಕ ಎಚ್.ಕೆ. ಪಾಟೀಲ್ ಸರ್ಕಾರಕ್ಕೆ ಖಡಕ್ ಗಡುವು ನೀಡಿದ್ದಾರೆ.

ಅಕ್ಟೋಬರ್ 10ರೊಳಗೆ ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ಘೋಷಿಸಿರುವುದು ಹೋರಾಟದ ಕಾವು ಮತ್ತಷ್ಟು ಹೆಚ್ಚಿಸಿದೆ.

ಗದಗ ತಾಲೂಕಿನ ಮುಳಗುಂದ ಪಟ್ಟಣದಲ್ಲಿ ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹಿಸಿ ರೈತರು ಭಾನುವಾರ ಭಾರೀ ಪ್ರತಿಭಟನೆ ನಡೆಸಿದರು. ಪಟ್ಟಣದ ಗಣೇಶ ಗುಡಿಯಿಂದ ಬಸಾಪುರ ಕ್ರಾಸ್‌ವರೆಗೆ ಮೆರವಣಿಗೆ ನಡೆಸಿದ ರೈತರು, ಬಳಿಕ ಗದಗ–ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ ತಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಧಿಕ್ಕಾರ ಕೂಗಿ ಅಸಮಾಧಾನ ಹೊರಹಾಕಿದರು.

ರೈತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎಚ್.ಕೆ. ಪಾಟೀಲ್, ಹೋರಾಟಕ್ಕೆ ಬೆಂಬಲ ಸೂಚಿಸುವುದರ ಜೊತೆಗೆ ಸರ್ಕಾರದ ಕ್ರಮದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗದಗ ತಾಲೂಕಿನಲ್ಲಿ ಶೇ.49ರಷ್ಟು ಮಳೆ ಕೊರತೆಯಾಗಿದ್ದರೂ, ಸರ್ಕಾರದ ಮೂರನೇ ಹಂತದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಗದಗವನ್ನು ಕೈಬಿಟ್ಟಿರುವುದಕ್ಕೆ ಅವರು ಪ್ರಶ್ನೆ ಎತ್ತಿದರು.

ಜಿಲ್ಲಾಉಸ್ತುವಾರಿ ಸಚಿವರು ಹಾಗೂ ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿ ಗದಗದ ಬರ ಪರಿಸ್ಥಿತಿಯ ಕುರಿತು ಚರ್ಚಿಸಲಾಗಿತ್ತು. ಅಧಿಕಾರಿಗಳ ವರದಿ ಬಳಿಕ ಮುಖ್ಯಮಂತ್ರಿಗಳು ಗದಗ ಜಿಲ್ಲೆಗೆ ಭೇಟಿ ನೀಡಿ ಕದಾಂಪುರದಿಂದ ಕುರ್ತಕೋಟಿವರೆಗೆ ಬೆಳೆ ಹಾನಿ ವೀಕ್ಷಣೆ ನಡೆಸಿದ್ದರು. ಇಷ್ಟೆಲ್ಲಾ ಆದರೂ ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಎಚ್.ಕೆ. ಪಾಟೀಲ್ ಹೇಳಿದರು.

ರೈತರ ಪರಿಸ್ಥಿತಿ ತನಗೆ ಅರಿವಿದ್ದು, ರೈತ ಕುಟುಂಬದಿಂದ ಬಂದವನಾಗಿ ಅವರ ಸಂಕಷ್ಟವನ್ನು ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳಿದ ಅವರು, ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಸರ್ಕಾರದ ಮಟ್ಟದಲ್ಲಿ ಅಗತ್ಯ ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ಮೂರು ದಿನಗಳಲ್ಲಿ ಘೋಷಣೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಹೇಳಿದ ಅವರು, ಅದು ಸಾಧ್ಯವಾಗದಿದ್ದರೆ ವಿಧಾನಸಭೆಯ ಮೂಲಕ ಸರ್ಕಾರಕ್ಕೆ ಅಕ್ಟೋಬರ್ 10ರ ಗಡುವು ನೀಡುವುದಾಗಿ ಸ್ಪಷ್ಟಪಡಿಸಿದರು. ಆ ಗಡುವಿನೊಳಗೆ ಗದಗ ತಾಲೂಕು ಬರಪೀಡಿತ ಎಂದು ಘೋಷಣೆಯಾಗದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು.

ಇದೇ ವೇಳೆ ಉತ್ತರ ಕರ್ನಾಟಕದ 73 ತಾಲೂಕುಗಳ ಪೈಕಿ 27 ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಎಚ್.ಕೆ. ಪಾಟೀಲ್ ತಿಳಿಸಿದರು. ಗದಗ ಸೇರಿದಂತೆ ಉತ್ತರ ಕರ್ನಾಟಕದ ಉಳಿದ ತಾಲೂಕುಗಳನ್ನೂ ಬರಪೀಡಿತ ತಾಲೂಕುಗಳೆಂದು ಘೋಷಿಸಿ ರೈತರಿಗೆ ಪರಿಹಾರ ಕಲ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಬರ ಘೋಷಣೆಗೆ ಆಗ್ರಹಿಸಿ ನಡೆದ ರೈತರ ಹೆದ್ದಾರಿ ತಡೆ ಪ್ರತಿಭಟನೆಯಿಂದ ಮುಳಗುಂದದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರೈತರ ಹೋರಾಟಕ್ಕೆ ಶಾಸಕ ಎಚ್.ಕೆ. ಪಾಟೀಲ್ ನೀಡಿದ ರಾಜೀನಾಮೆ ಗಡುವು ಇದೀಗ ಸರ್ಕಾರದ ಮುಂದಿನ ನಿರ್ಧಾರದತ್ತ ಗಮನ ಸೆಳೆದಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img