ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ ಎಂದು ಆರೋಪಿಸಿ ಬಿಜೆಪಿ–ಜೆಡಿಎಸ್ ನಿಯೋಗ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ ದೂರು ಸಲ್ಲಿಸಿದೆ.
ಹೊರಟ್ಟಿ ಅವರ ರಾಜೀನಾಮೆಯನ್ನು ಅಂಗೀಕರಿಸಬಾರದು ಎಂದು ನಿಯೋಗ ರಾಜ್ಯಪಾಲರಿಗೆ ಮನವಿ ಮಾಡಿದೆ.
ಬಿಜೆಪಿ–ಜೆಡಿಎಸ್ ನಿಯೋಗವು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಜೆಡಿಎಸ್ನ ಡಾ. ಟಿ.ಎ. ಶರವಣ ಅವರ ನೇತೃತ್ವದಲ್ಲಿ ಲೋಕಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿತು. ಈ ವೇಳೆ ಹೊರಟ್ಟಿ ಅವರ ರಾಜೀನಾಮೆಗೆ ಸಂಬಂಧಿಸಿದ ಬೆಳವಣಿಗೆಗಳ ಕುರಿತು ರಾಜ್ಯಪಾಲರ ಗಮನಕ್ಕೆ ತರಲಾಯಿತು.
ಸದನದ ನಡಾವಳಿಯಂತೆ ರಾಜೀನಾಮೆ ಸಲ್ಲಿಕೆಯಾಗಿಲ್ಲ ಎಂದು ನಿಯೋಗ ದೂರಿನಲ್ಲಿ ಉಲ್ಲೇಖಿಸಿದೆ. ಹೀಗಾಗಿ ರಾಜೀನಾಮೆಯನ್ನು ಅಂಗೀಕರಿಸಬಾರದು ಹಾಗೂ ಈ ಕುರಿತು ಸೂಕ್ತ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದೆ.
ಇದರ ಜೊತೆಗೆ ಕಾಂಗ್ರೆಸ್ ಲೆಟರ್ಹೆಡ್ನಲ್ಲಿ ವಿಧಾನಸಭೆ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸಭಾಪತಿ ಸ್ಥಾನಗಳಿಗೆ ಹೆಸರುಗಳ ಆಯ್ಕೆ ಕುರಿತು ಚರ್ಚೆ ನಡೆದಿರುವ ಬಗ್ಗೆಯೂ ರಾಜ್ಯಪಾಲರಿಗೆ ನಿಯೋಗ ದೂರು ನೀಡಿದೆ.
‘ಒತ್ತಡ ಹೇರಿ ರಾಜೀನಾಮೆ ಪಡೆದರು’ ಎಂದು ಹೊರಟ್ಟಿ ವಿವರಣೆ:
ಇದೇ ವೇಳೆ, ಆಗಸ್ಟ್ 7ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿ.ಕೆ. ಹರಿಪ್ರಸಾದ್ ನೇತೃತ್ವದ ನಾಯಕರು ತಮ್ಮ ಕೊಠಡಿಗೆ ಆಗಮಿಸಿ, ಅಂದೇ ರಾಜೀನಾಮೆ ನೀಡುವಂತೆ ಒತ್ತಡ ಹೇರಿದ್ದರು ಎಂದು ಬಸವರಾಜ ಹೊರಟ್ಟಿ ಅವರು ರಾಜ್ಯಪಾಲರಿಗೆ ಪತ್ರದ ಮೂಲಕ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.
ನಾಯಕರ ಒತ್ತಡದ ಹಿನ್ನೆಲೆಯಲ್ಲಿ ತಮ್ಮಿಂದ ರಾಜೀನಾಮೆ ಪಡೆಯಲಾಗಿದೆ ಎಂಬ ಅಂಶವನ್ನು ಹೊರಟ್ಟಿ ಅವರು ರಾಜ್ಯಪಾಲರ ಗಮನಕ್ಕೆ ತಂದಿದ್ದಾರೆ ಎಂದು ಬಿಜೆಪಿ–ಜೆಡಿಎಸ್ ನಿಯೋಗ ತಿಳಿಸಿದೆ.
ಹೀಗಾಗಿ ರಾಜೀನಾಮೆ ಸ್ವಯಂಪ್ರೇರಿತವಾಗಿತ್ತೇ ಅಥವಾ ಒತ್ತಡದ ಹಿನ್ನೆಲೆಯಲ್ಲಿ ನೀಡಲಾಗಿತ್ತೇ ಎಂಬುದನ್ನು ಪರಿಶೀಲಿಸಿ, ಸಂವಿಧಾನಾತ್ಮಕ ನಿಯಮಗಳಂತೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ–ಜೆಡಿಎಸ್ ಸದಸ್ಯರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಬಸವರಾಜ ಹೊರಟ್ಟಿ ಅವರ ರಾಜೀನಾಮೆ ವಿಚಾರ ಇದೀಗ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದ್ದು, ರಾಜ್ಯಪಾಲರು ಈ ಕುರಿತು ಕೈಗೊಳ್ಳುವ ಮುಂದಿನ ಕ್ರಮ ಕುತೂಹಲ ಮೂಡಿಸಿದೆ.



