ಶಿವಮೊಗ್ಗ: ಮಧ್ಯರಾತ್ರಿ 12 ಗಂಟೆ. ಸಿಗಂದೂರು ಸೇತುವೆ ಮೇಲೆ ತಿರಂಗಾ. ಕೈಯಲ್ಲಿ ರಾಷ್ಟ್ರಧ್ವಜ ಹಿಡಿದ ಗ್ರಾಮಸ್ಥರು. ಮೊಳಗಿದ ‘ವಂದೇ ಮಾತರಂ’ ಘೋಷಣೆ. ಹೀಗೆ ಕರೂರು ಗ್ರಾಮಸ್ಥರು 80ನೇ ಸ್ವಾತಂತ್ರ್ಯೋತ್ಸವವನ್ನು ವಿಶಿಷ್ಟವಾಗಿ ಬರಮಾಡಿಕೊಂಡಿದ್ದಾರೆ.
ಕಳೆದ ವರ್ಷ ಲೋಕಾರ್ಪಣೆಗೊಂಡ ಸಿಗಂದೂರು ಸೇತುವೆ ಮೇಲೆ ಮಧ್ಯರಾತ್ರಿ ಧ್ವಜಾರೋಹಣ ನೆರವೇರಿಸಿದ ಗ್ರಾಮಸ್ಥರು, ಬಳಿಕ ತಿರಂಗಾ ಹಿಡಿದು ಸೇತುವೆ ಮೇಲೆ ಮೆರವಣಿಗೆ ನಡೆಸಿದರು. ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದರ ಜತೆಗೆ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲೂ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮ ನಡೆಯಿತು. ದೇವರ ಸನ್ನಿಧಿಯಲ್ಲಿ ರಾಷ್ಟ್ರಧ್ವಜವಿಟ್ಟು ಪೂಜೆ ಸಲ್ಲಿಸಲಾಯಿತು. ದೇವಾಲಯದ ಸಿಬ್ಬಂದಿ, ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ದೇಶಭಕ್ತಿ ಮತ್ತು ಧಾರ್ಮಿಕ ಆಚರಣೆಯನ್ನು ಒಟ್ಟುಗೂಡಿಸಿ ಮಧ್ಯರಾತ್ರಿಯಲ್ಲೇ ಸ್ವಾತಂತ್ರ್ಯೋತ್ಸವ ಆಚರಿಸಿದ ಕರೂರು ಗ್ರಾಮಸ್ಥರ ವಿಭಿನ್ನ ಪ್ರಯತ್ನ ಗಮನ ಸೆಳೆದಿದೆ.



