ಶಿವಮೊಗ್ಗ: ಎಸ್. ಜಾನಕಿ ಸ್ಮರಣಾರ್ಥ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ವೇದಿಕೆ ಏರಲು ನಿರಾಕರಿಸಿದ ಪೊಲೀಸ್ ಸಿಬ್ಬಂದಿ ಉಮೇಶ್ ಹಾಗೂ ಅವರ ಸಂಬಂಧಿಕರ ಮೇಲೆ ಹಲ್ಲೆ ನಡೆದಿರುವ ಆರೋಪ ಭದ್ರಾವತಿಯಲ್ಲಿ ಕೇಳಿಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಜನ್ನಾಪುರದ ಮಲ್ಲೇಶ್ವರ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಮೇಶ್ ಅನ್ನದಾನ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಇದೇ ವೇಳೆ ವೇದಿಕೆಯಲ್ಲಿ ಭದ್ರಾವತಿ ಶಾಸಕರ ಪುತ್ರ ಗಣೇಶ್ ಇದ್ದರು. ಉಮೇಶ್ ಅವರನ್ನು ವೇದಿಕೆಗೆ ಆಹ್ವಾನಿಸಲಾಗಿದ್ದರೂ, ಅವರು ಅದನ್ನು ನಿರಾಕರಿಸಿದ್ದರೆನ್ನಲಾಗಿದೆ.
“ಭ್ರಷ್ಟರ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ” ಎಂದು ಉಮೇಶ್ ಹೇಳಿದ ಬಳಿಕ ಸ್ಥಳದಲ್ಲಿ ವಾಗ್ವಾದ ಉಂಟಾಗಿದೆ ಎಂಬ ಆರೋಪ ಕೇಳಿಬಂದಿದೆ. ನಂತರ ಮಾತಿನ ಚಕಮಕಿ ತೀವ್ರಗೊಂಡು, ಉಮೇಶ್ ಹಾಗೂ ಅವರ ಸಹೋದರನ ಪುತ್ರ ಸುಹಾಸ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಂತ್ರಸ್ತರು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಾರ್ವಜನಿಕ ಕಾರ್ಯಕ್ರಮದಲ್ಲಿ ನಡೆದ ಈ ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಗಳ ಸತ್ಯಾಸತ್ಯತೆ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.



