ಬೆಂಗಳೂರು: ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಪವಿತ್ರ ಕೇದಾರನಾಥ ಕ್ಷೇತ್ರದಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಗುರುಲಿಂಗಯ್ಯ (76) ಅವರು ಸೋಮವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಲಿಂಗೈಕ್ಯರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಕಳೆದ ಕೆಲವು ದಿನಗಳಿಂದ ಬಳಲುತ್ತಿದ್ದ ಗುರುಲಿಂಗಯ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕೇದಾರನಾಥ ಕ್ಷೇತ್ರದಲ್ಲಿ ದಶಕಗಳ ಕಾಲ ಶಿವನ ಆರಾಧನೆ ಹಾಗೂ ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದ ಹಿರಿಯ ಅರ್ಚಕರ ನಿಧನಕ್ಕೆ ಭಕ್ತರು ಹಾಗೂ ಧಾರ್ಮಿಕ ವಲಯದಲ್ಲಿ ಸಂತಾಪ ವ್ಯಕ್ತವಾಗಿದೆ.
ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕ ಬಾಗೇವಾಡಿ ಗ್ರಾಮದವರಾದ ಗುರುಲಿಂಗಯ್ಯ ಅವರ ಕುಟುಂಬ ಕಳೆದ ಮೂರು ತಲೆಮಾರುಗಳಿಂದ ಉತ್ತರಾಖಂಡದಲ್ಲಿ ನೆಲೆಸಿದೆ.
ಕೇದಾರಪೀಠದ 322ನೇ ಜಗದ್ಗುರು ರಾವಲ್ ಶಾಂತ ಶಿವಾಚಾರ್ಯ ಭಗವತ್ಪಾದರ ಕಾಲದಲ್ಲಿ ಗುರುಲಿಂಗಯ್ಯ ಅವರು ಕೇದಾರನಾಥ ಕ್ಷೇತ್ರದಲ್ಲಿ ಅರ್ಚಕರಾಗಿ ಸೇವೆ ಆರಂಭಿಸಿದ್ದರು.
1970ರಿಂದ ಸುಮಾರು 40 ವರ್ಷಗಳ ಕಾಲ ಕೇದಾರನಾಥೇಶ್ವರನ ಪ್ರಧಾನ ಅರ್ಚಕರಾಗಿ ನಿಷ್ಠೆ, ಶ್ರದ್ಧೆ ಹಾಗೂ ಭಕ್ತಿಯಿಂದ ಸೇವೆ ಸಲ್ಲಿಸಿದ್ದರು. ತಮ್ಮ ಸರಳತೆ ಹಾಗೂ ಧಾರ್ಮಿಕ ಸೇವೆಯ ಮೂಲಕ ಭಕ್ತರು ಹಾಗೂ ಕ್ಷೇತ್ರದೊಂದಿಗೆ ನಿಕಟ ಸಂಬಂಧ ಹೊಂದಿದ್ದರು.
ಕೇದಾರನಾಥ ಪೀಠದ ಸಾಂಪ್ರದಾಯಿಕ ನಿಯಮಗಳ ಪ್ರಕಾರ, ದಕ್ಷಿಣ ಭಾರತ, ವಿಶೇಷವಾಗಿ ಕರ್ನಾಟಕದ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಜಂಗಮ ಅರ್ಚಕರೇ ಕೇದಾರನಾಥ ಕ್ಷೇತ್ರದಲ್ಲಿ ಪೂಜೆ ಸಲ್ಲಿಸುವ ರಾವಲ್ ಅಥವಾ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುವ ಪರಂಪರೆ ಇದೆ.
ಈ ಪವಿತ್ರ ಧಾರ್ಮಿಕ ಪರಂಪರೆಯಲ್ಲಿ ಗುರುಲಿಂಗಯ್ಯ ಅವರು ಪ್ರಮುಖ ಪಾತ್ರ ವಹಿಸಿದ್ದರು. ದಶಕಗಳ ಕಾಲ ಕೇದಾರನಾಥೇಶ್ವರನ ಆರಾಧನೆ ಹಾಗೂ ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಂಡು ಧಾರ್ಮಿಕ ಕ್ಷೇತ್ರದಲ್ಲಿ ತಮ್ಮದೇ ಆದ ಗೌರವ ಪಡೆದಿದ್ದರು.
ಗುರುಲಿಂಗಯ್ಯ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಅವರ ಸ್ವಗ್ರಾಮವಾದ ಬೆಳಗಾವಿ ಜಿಲ್ಲೆಯ ಚಿಕ್ಕ ಬಾಗೇವಾಡಿಗೆ ತರಲಾಗಿದೆ.
ಇಂದು ಸಂಜೆ 4 ಗಂಟೆಗೆ ವೀರಶೈವ ಲಿಂಗಾಯತ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಸಕಲ ಗೌರವಗಳೊಂದಿಗೆ ಅವರ ಕ್ರಿಯಾ ಸಮಾಧಿ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.
ನಾಲ್ಕು ದಶಕಗಳ ಕಾಲ ಕೇದಾರನಾಥ ಕ್ಷೇತ್ರದಲ್ಲಿ ಶಿವನ ಸೇವೆ ಸಲ್ಲಿಸಿದ ಹಿರಿಯ ಅರ್ಚಕರ ಅಗಲಿಕೆಯಿಂದ ಧಾರ್ಮಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಭಕ್ತರು ಸಂತಾಪ ವ್ಯಕ್ತಪಡಿಸಿದ್ದಾರೆ.



