ಹಿರಿತೆರೆ ಹಾಗೂ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಹಾಗೂ ನಿರೂಪಕಿ ಅನುಪಮಾ ಗೌಡ ಅವರು ಆ್ಯಂಕರಿಂಗ್ಗೆ ವಿದಾಯ ಹೇಳಿದ್ದಾರೆ.
ಹಲವು ವರ್ಷಗಳಿಂದ ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳನ್ನು ನಿರೂಪಿಸುತ್ತಿದ್ದ ಅವರು, ಇದೀಗ ಅನಿವಾರ್ಯ ಕಾರಣಗಳಿಂದ ಆ್ಯಂಕರಿಂಗ್ ಜರ್ನಿಯನ್ನು ಅಪೂರ್ಣವಾಗಿ ಅಂತ್ಯಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ.
ಆ್ಯಂಕರಿಂಗ್ ಕ್ಷೇತ್ರದಲ್ಲಿ ಅನುಪಮಾ ಗೌಡ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಅನುಪಮಾ ಗೌಡ ಅವರು ಕಲರ್ಸ್ ಕನ್ನಡ ಸೇರಿದಂತೆ ಹಲವು ವಾಹಿನಿಗಳ ಜನಪ್ರಿಯ ಕಾರ್ಯಕ್ರಮಗಳನ್ನು ನಿರೂಪಿಸಿ ಪ್ರೇಕ್ಷಕರ ಮನಗೆದ್ದಿದ್ದರು.
ಹಲವು ಜನಪ್ರಿಯ ಶೋಗಳ ನಿರೂಪಕಿ:
ಅನುಪಮಾ ಗೌಡ ಅವರು ‘ಮಜಾ ಭಾರತ್’, ‘ಕನ್ನಡ ಕೋಗಿಲೆ’, ‘ರಾಜಾ ರಾಣಿ’, ‘ನಮ್ಮಮ್ಮ ಸೂಪರ್ ಸ್ಟಾರ್’, ‘ಸುವರ್ಣ ಸೂಪರ್ಸ್ಟಾರ್ಸ್’, ‘ಸುವರ್ಣ ಜ್ಯಾಕ್ಪಾಟ್’, ‘ಗರ್ಲ್ಸ್ vs ಬಾಯ್ಸ್’ ಹಾಗೂ ‘ಕ್ವಾಟ್ಲೆ ಕಿಚನ್’ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರೂಪಿಸಿದ್ದಾರೆ.
ಆದರೆ, ತಮ್ಮ ಕೊನೆಯ ಶೋವನ್ನು ಸಂಪೂರ್ಣವಾಗಿ ಮುಗಿಸುವ ಅವಕಾಶ ಸಿಗದಿರುವುದು ಅವರಿಗೆ ಬೇಸರ ತಂದಿದೆ. ಈ ಕುರಿತು ಮಾತನಾಡಿರುವ ಅವರು ತಮ್ಮ ಆ್ಯಂಕರಿಂಗ್ ಪಯಣವನ್ನು ನೆನಪಿಸಿಕೊಂಡಿದ್ದಾರೆ.
ತಮ್ಮ ವಿಡಿಯೋದಲ್ಲಿ ಅನುಪಮಾ ಗೌಡ ಅವರು, ಆ್ಯಂಕರಿಂಗ್ಗೆ ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
“ನಾನು ನಿಮ್ಮೆಲ್ಲರಲ್ಲೂ ಕ್ಷಮೆ ಕೇಳುತ್ತೇನೆ. ಹೊಸ ಶೋನಲ್ಲಿ ನಾನು ಇರಬೇಕಿತ್ತು. ಆದರೆ, ಇಲ್ಲ. ವಾಹಿನಿಯವರು ಏನೇನೋ ಪ್ರಾಮಿಸ್ ಮಾಡಿಕೊಂಡಿದ್ದಾರೆ. ಅದೇನು ಎಂಬುದು ನಾನು ಮಾಡಿಲ್ಲ. ಅಪೂರ್ಣವಾಗಿ ಈ ಪ್ರಯಾಣ ಕೊನೆ ಮಾಡುತ್ತಿದ್ದೇನೆ. ನೀವೆಲ್ಲ ‘ಸಾಕಮ್ಮ’ ಎನ್ನುವುದರೊಳಗೆ ನಾನೇ ಆ್ಯಂಕರಿಂಗ್ ಮುಗಿಸಿದ್ದೇನೆ” ಎಂದು ಭಾವುಕರಾಗಿ ಹೇಳಿದ್ದಾರೆ.
ಅಲ್ಲದೆ, ಮುಂದೆ ಮತ್ತೆ ಸೀರಿಯಲ್ಗೆ ಬರುತ್ತಾರೋ ಇಲ್ಲವೋ ಎಂಬುದು ತಮಗೂ ಗೊತ್ತಿಲ್ಲ ಎಂದು ಅನುಪಮಾ ತಿಳಿಸಿದ್ದಾರೆ.
ಅನುಪಮಾ ಗೌಡ ಅವರ ಈ ನಿರ್ಧಾರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಕೆಲವರು ತಮ್ಮ ನಿರ್ಧಾರವನ್ನು ಬದಲಿಸಿಕೊಳ್ಳುವಂತೆ ಮನವಿ ಮಾಡಿದರೆ, ಮತ್ತಷ್ಟು ಅಭಿಮಾನಿಗಳು ಅವರ ಮುಂದಿನ ವೃತ್ತಿಜೀವನಕ್ಕೆ ಶುಭ ಹಾರೈಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲೂ ಅನುಪಮಾ ಗೌಡ ಅವರಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಅವರ ಆ್ಯಂಕರಿಂಗ್ ಶೈಲಿಯನ್ನು ಮೆಚ್ಚಿಕೊಂಡಿರುವ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಅನುಪಮಾ ಗೌಡ ಅವರು 2003ರಲ್ಲಿ ಬಿಡುಗಡೆಯಾದ ‘ಲಂಕೇಶ್ ಪತ್ರಿಕೆ’ ಸಿನಿಮಾದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ಬಳಿಕ 2014ರಲ್ಲಿ ಪ್ರಸಾರವಾದ ‘ಅಕ್ಕ’ ಧಾರಾವಾಹಿ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತು. ಈ ಧಾರಾವಾಹಿಯಲ್ಲಿ ಅವರು ದ್ವಿಪಾತ್ರದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು.
2017-18ರಲ್ಲಿ ಪ್ರಸಾರವಾದ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಸಿನಿಮಾಗಳಲ್ಲೂ ಅಭಿನಯಿಸಿರುವ ಅನುಪಮಾ ಗೌಡ ಅವರು ತಮ್ಮ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ನಟನೆ, ನಿರೂಪಣೆ ಹಾಗೂ ವಿವಿಧ ಕಿರುತೆರೆ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಅನುಪಮಾ ಗೌಡ ಅವರ ಆ್ಯಂಕರಿಂಗ್ ಜರ್ನಿ ಸದ್ಯಕ್ಕೆ ಅಂತ್ಯಗೊಂಡಿದ್ದು, ಮುಂದಿನ ದಿನಗಳಲ್ಲಿ ಅವರು ಯಾವ ಕ್ಷೇತ್ರದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.



