ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ-1 ಆರೋಪಿ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ (42) ಮೃತಪಟ್ಟಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ರಾಜಸ್ಥಾನದಲ್ಲಿ ಸುಮಾರು 7–8 ತಿಂಗಳ ಹಿಂದೆಯೇ ಅವರು ನಿಧನರಾಗಿದ್ದಾರೆ ಎನ್ನಲಾಗಿದ್ದು, ಇಷ್ಟು ದಿನಗಳ ಬಳಿಕ ಅವರ ಸಾವಿನ ಸುದ್ದಿ ಬಹಿರಂಗವಾಗಿದೆ.
ನಟಿ ಪವಿತ್ರಾ ಗೌಡ ಹಾಗೂ ನಟ ದರ್ಶನ್ ಬಂಧನದ ಸಂದರ್ಭದಲ್ಲಿ ಸಂಜಯ್ ಸಿಂಗ್ ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದರು. ಮಾಜಿ ಪತ್ನಿಯ ಪರವಾಗಿ ಮಾಧ್ಯಮಗಳ ಎದುರು ನಿಂತು ಮಾತನಾಡಿದ್ದ ಅವರು, ಪವಿತ್ರಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು.
ಬಳಿಕ ರಾಜಸ್ಥಾನಕ್ಕೆ ಮರಳಿದ್ದ ಸಂಜಯ್ ಸಿಂಗ್ ಅಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಪವಿತ್ರಾ ಗೌಡ ಅವರಿಂದ ವಿಚ್ಛೇದನ ಪಡೆದ ನಂತರ ಸಂಜಯ್ ಸಿಂಗ್ ರಾಜಸ್ಥಾನದಲ್ಲೇ ನೆಲೆಸಿದ್ದರು. ದಾಂಪತ್ಯ ಜೀವನದ ಮುರಿತದ ಬಳಿಕ ಅವರು ಖಿನ್ನತೆಗೆ ಒಳಗಾಗಿದ್ದರು ಹಾಗೂ ಮದ್ಯಪಾನದ ಚಟಕ್ಕೆ ಬಲಿಯಾಗಿದ್ದರು ಎನ್ನಲಾಗಿದೆ. ಆರೋಗ್ಯದಲ್ಲಿ ಕ್ರಮೇಣ ಏರುಪೇರು ಉಂಟಾಗಿ ಕೊನೆಗೆ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಂಜಯ್ ಸಿಂಗ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದು, ಕಂಪ್ಯೂಟರ್ ಇನ್ಸ್ಟಿಟ್ಯೂಟ್ ಕೂಡ ನಡೆಸುತ್ತಿದ್ದರು. 2007–08ರಲ್ಲಿ ಪವಿತ್ರಾ ಗೌಡ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. 2011ರಲ್ಲಿ ಅವರಿಗೆ ಖುಷಿ ಎಂಬ ಪುತ್ರಿ ಜನಿಸಿದ್ದರು. ಬಳಿಕ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದರು.
ವಿಚ್ಛೇದನದ ಬಳಿಕ ಬೆಂಗಳೂರು ತೊರೆದಿದ್ದ ಸಂಜಯ್ ಸಿಂಗ್ ರಾಜಸ್ಥಾನದಲ್ಲಿ ತಮ್ಮ ಜೀವನ ಮುಂದುವರಿಸಿದ್ದರು. ಆದರೆ ಪವಿತ್ರಾ ಗೌಡ ಬಂಧನದ ಸಂದರ್ಭದಲ್ಲಿ ಮಾತ್ರ ಬೆಂಗಳೂರಿಗೆ ಮರಳಿ ಮಾಜಿ ಪತ್ನಿಯ ಬೆಂಬಲಕ್ಕೆ ನಿಂತಿದ್ದರು. ಇದೀಗ ಅವರ ನಿಧನದ ಸುದ್ದಿ ಹಲವು ತಿಂಗಳ ಬಳಿಕ ಹೊರಬಂದಿರುವುದು ಪ್ರಕರಣದ ಬೆಳವಣಿಗೆಗಳ ನಡುವೆ ಮತ್ತೊಂದು ಗಮನಾರ್ಹ ಸಂಗತಿಯಾಗಿದೆ.



