ಚೆನ್ನೈ: ತಮಿಳುನಾಡು ಶಾಸಕರಿಗೆ ಸಿಎಂ ಜೋಸೆಫ್ ವಿಜಯ್ ಬಂಪರ್ ಕೊಡುಗೆಗಳನ್ನು ಘೋಷಿಸಿದ್ದಾರೆ. ಇನ್ಮುಂದೆ ರಾಜ್ಯದ ಎಲ್ಲಾ 234 ಶಾಸಕರಿಗೆ ಕಾರು, ಇಂಧನ ಮತ್ತು ನಿರ್ವಹಣಾ ವೆಚ್ಚಗಳಿಗಾಗಿ ಭತ್ಯೆ ಸಿಗಲಿದೆ.
ತಮಿಳುನಾಡು ಶಾಸಕರಿಗೆ ಕಾರು, ಇಂಧನ ಭತ್ಯೆ ಹಾಗೂ ಕಾರ್ಯದರ್ಶಿ ವ್ಯವಸ್ಥೆ ಸಿಗಲಿದೆ. ಶಾಸಕರು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳಿಗೆ ಸಹಾಯವಾಗಲೆಂದು ಸರ್ಕಾರಿ ವಾಹನ ನೀಡಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ. ಜನರ ಸಮಸ್ಯೆಗಳನ್ನು ಪರಿಹರಿಸಲು ಶಾಸಕರು ತಮ್ಮ ಕ್ಷೇತ್ರಗಳಿಗೆ ಆಗಾಗ್ಗೆ ಪ್ರಯಾಣಿಸಬೇಕಾಗುತ್ತದೆ, ಸರ್ಕಾರಿ ವಾಹನವು ಪಾರದರ್ಶಕ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಖಚಿತಪಡಿಸುತ್ತದೆ ಎಂದು ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಆಯ್ಕೆಯಾದ ಮತ್ತು ಬಡ ಹಿನ್ನೆಲೆಯಿಂದ ಬಂದ ಹಲವಾರು ಶಾಸಕರಿದ್ದು, ಜನಪ್ರತಿನಿಧಿಯಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅವರಿಗೆ ಕಾರು ಅಗತ್ಯವಿದೆ ಎಂದು ಸಿಎಂ ಹೇಳಿದ್ದಾರೆ.
ಅಗತ್ಯವಿರುವ ಲಾಜಿಸ್ಟಿಕ್ಸ್ ಬೆಂಬಲವಿಲ್ಲದೆ ಶಾಸಕರು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ವಿಸಿಕೆ ಶಾಸಕ ಜ್ಯೋತಿಮಣಿ ಈ ಹಿಂದೆ ಹೇಳಿ, ಶಾಸಕರಿಗೆ ಕಾರುಗಳನ್ನು ನೀಡುವಂತೆ ವಿನಂತಿಸಿದ್ದರು. ಈ ಮನವಿಯ ಬೆನ್ನಲ್ಲೇ ಸರ್ಕಾರದಿಂದ ಈ ಘೋಷಣೆ ಹೊರಬಿದ್ದಿದೆ.
ವಿಜಯ್ ಸರ್ಕಾರವು ಶಾಸಕರಿಗೆ ಚಾಲಕ, ಇಂಧನ ಮತ್ತು ಕಾರುಗಳ ನಿರ್ವಹಣೆ ವೆಚ್ಚಗಳಿಗಾಗಿ ತಿಂಗಳಿಗೆ ₹75,000 ಭತ್ಯೆಯನ್ನು ಘೋಷಿಸಿದೆ. ಹೆಚ್ಚುವರಿಯಾಗಿ, ಶಾಸಕರು ಈಗ ಅಧಿಕೃತ ಕೆಲಸಕ್ಕಾಗಿ ಕಾರ್ಯದರ್ಶಿಯನ್ನು ನೇಮಿಸಿಕೊಳ್ಳಲು ₹25,000 ರಾಜ್ಯ ಅನುದಾನವನ್ನು ಪಡೆಯಲಿದ್ದಾರೆ. ಮುಖ್ಯಮಂತ್ರಿಯ ಈ ಘೋಷಣೆಯನ್ನು ಶಾಸಕರು ಸ್ವಾಗತಿಸಿದ್ದಾರೆ.



